ನವದೆಹಲಿ: ಇಂದು ಸರ್ಕಾರದ ಜತೆ ಪ್ರತಿಭಟನಾ ನಿರತ ರೈತರ ಎಂಟನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅನ್ನದಾತರು ಸಭೆಗೂ ಮುನ್ನ ಮೂರು ಷರತ್ತುಗಳನ್ನಿರಿಸಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆಗೆ ದೆಹಲಿ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ.
ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈತ್, ಸಭೆಯಲ್ಲಿ ಸ್ವಾಮಿನಾಥನ್ ಸಮಿತಿ ವರದಿ, ಮೂರು ಕೃಷಿ ಕಾನೂನು ಹಿಂಪಡೆಯುವುದು ಮತ್ತು ಎಂಎಸ್‍ಪಿ (ಬೆಂಬಲ ಬೆಲೆ) ಬಗ್ಗೆ ಚರ್ಚೆಗಳು ನಡೆಯಬೇಕೆಂದು ಮೂರು ಷರತ್ತುಗಳನ್ನ ಇರಿಸಿದ್ದಾರೆ. ಧರಣಿ ವೇಳೆ 60 ರೈತರು ಸಾವನ್ನಪ್ಪಿದ್ದು, ನಾವು ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ.
ಇಂದು ಮೂರು ಕಾಯ್ದೆಗಳನ್ನ ಹಿಂಪಡೆದುಕೊಂಡು, ಬೆಂಬಲ ಬೆಲೆ ಬಗ್ಗೆ ಹೊಸ ಕಾನೂನು ತರಬೇಕು. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ರೆ ಜನವರಿ 6ರಂದು ಟ್ರ್ಯಾಕ್ಟರ್ ತಂದು ಪ್ರತಿಭಟನೆ ನಡೆಸುತ್ತೇವೆ. ಜನವರಿ 7 ರಿಂದ ರೈತ ವಿರೋಧಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಲಿದೆ ಎಂದು ಕಿಸಾನ್ ಮಜ್ದೂರ್ ಕಮೀಟಿ ನಾಯಕ ಸುಖ್‍ವಿಂದರ್ ಸಿಂಗ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇಂದಿನ ಸಭೆಯಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನ ಪೂರ್ಣ ಮಾಡದಿದ್ರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದಿದ್ದಾರೆ. ಏಳನೇ ಬಾರಿ ನಡೆದ ಸಭೆಯಲ್ಲಿ ಎರಡು ಬೇಡಿಕೆಗಳನ್ನ ಪೂರೈಸಲು ಸರ್ಕಾರ ಒಪ್ಪಿಕೊಂಡಿತ್ತು. ಇವತ್ತು ಇನ್ನುಳಿದ ಎರಡು ಬೇಡಿಕೆಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಲಿದೆ.