– ಸರ್ಕಾರಿ ಆಸ್ಪತ್ರೆಗೆ ಉಪಕರಣ ಹಸ್ತಾಂತರ
ಮಂಗಳೂರು: ಬಂಟ್ವಾಳದ ಮಾಣಿ ವಲಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಗು, ಗಂಟಲ ದ್ರವ ಸಂಗ್ರಹಿಸುವ ಉಪಕರಣವನ್ನು ದಾನವಾಗಿ ನೀಡಲಾಯಿತು.
Advertisement
ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆಯವರು ಉಪಕರಣವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್-19 ಜಗತ್ತನ್ನೇ ಬಾಧಿಸಿದ್ದು, ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವ ಉದ್ದೇಶದಿಂದ ಮಾಣಿ ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆಯ ಸಾಧನವನ್ನು ಕೊಡುಗೆಯಾಗಿ ನೀಡಿರುವುದು ಅಭಿನಂದನೀಯ ಎಂದರು.
Advertisement
ಮಾಣಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ದಾನಿಗಳು ಹಾಗೂ ಸಮಾನ ಮನಸ್ಕರ ಸಹಕಾರದೊಂದಿಗೆ ಮಾಣಿ ಸ್ಥಳೀಯ ಸಂಸ್ಥೆಯ ವತಿಯಿಂದ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿ ಎಂಬಂತೆ ನಮ್ಮ ಸ್ಕೌಟ್ಸ್ ಸಂಸ್ಥೆ ವತಿಯಿಂದ ಮೂಗು, ಗಂಟಲು ದ್ರವ ಪರೀಕ್ಷಾ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದೇವೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಒದಗಿಸಿದ್ದೇವೆ ಎಂದರು.
Advertisement
Advertisement
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಕೊರೊನಾ ನಿಗ್ರಹಕ್ಕೆ ಆಸ್ಪತ್ರೆ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಸ್ಕೌಟ್ಸ್ ಸಂಸ್ಥೆ ವತಿಯಿಂದ ನಮ್ಮ ಆಸ್ಪತ್ರೆಗೆ ಕೊರೊನಾ ಟೆಸ್ಟ್ ಗೆ ಬಳಸುವ ಸಾಧನ ನೀಡಿರುವುದು ಹೆಚ್ಚು ಉಪಕಾರಿಯಾಗಿದೆ. ಇದಕ್ಕಾಗಿ ಹೆಚ್ಚು ಮುತುವರ್ಜಿ ವಹಿಸಿದ ಇಬ್ರಾಹಿಂ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಾಣಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಇಬ್ರಾಹಿಂ ಕೆ. ಮಾಣಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.