ಮಂಗಳೂರು: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಶವಾದವರನ್ನು ಯತಿರಾಜ್, ಸೌರವ್ ಹಾಗೂ ಭವಿತ್ ಎಂದು ಗುರುತಿಸಲಾಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತುಕೊಂಡು ವಿದ್ಯಾರ್ಥಿನಿ ಪ್ರೇಕ್ಷಾ(20) ಬೆಂಗಳೂರು ಹೊರಟಿದ್ದಳು.
ಗುರುವಾರ ಕೆಲಸಕ್ಕೆ ಹಾಜರಾಗಬೇಕಿದ್ದ ಪ್ರೇಕ್ಷಾ ಬುಧವಾರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೇಕ್ಷಾ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವೇಳೆ ಪ್ರೇಕ್ಷಾಳಿಗೆ ಯತಿರಾಜ್ ಎಂಬ ಯುವಕನ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಸಂಬಂಧ ಹೀಗೆ ಮುಂದುವರಿದಿತ್ತು. ಇತ್ತ ಯತಿರಾಜ್ ಡ್ರಗ್ಸ್ ವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದ್ದು, ಮಾಡೆಲಿಂಗ್ ಮಾಡದಂತೆ ಪ್ರೇಕ್ಷಾಳಿಗೆ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಅಂತೆಯೇ ಬೆಂಗಳೂರಿಗೆ ಬರುವ ಮೊದಲ ದಿನ ಅಂದರೆ ಬುಧವಾರ ಯತಿರಾಜ್ ತನ್ನ ಸ್ನೇಹಿತರಾದ ಸೌರವ್ ಹಾಗೂ ಭವಿತ್ ಜೊತೆ ಪ್ರೇಕ್ಷಾಳ ಮನೆ ಮಂಗಳೂರು ಹೊರವಲಯದ ಕುಂಪಲ ಆಶ್ರಯ ಕಾಲೋನಿ ಬಳಿ ಬಂದಿದ್ದನು. ಆ ಸಂದರ್ಭದಲ್ಲಿ ಪ್ರೇಕ್ಷಾ ಹಾಗೂ ಯತಿರಾಜ್ ನಡುವೆ ಬೆಂಗಳೂರಿಗೆ ಹೋಗುವ ವಿಚಾರವಾಗಿ ಜಗಳ ನಡೆದಿದೆ. ಜಗಳದ ಬಳಿಕ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.