– ಬೆಂಗಳೂರು, ಮಂಗಳೂರಿನಲ್ಲಿ ಶಂಕಿತರು ಅರೆಸ್ಟ್
– ಜಮ್ಮು ಕಾಶ್ಮೀರದ ಇಬ್ಬರು ಅರೆಸ್ಟ್
ನವದೆಹಲಿ/ಮಂಗಳೂರು: ಐಸಿಸ್ ಜೊತೆ ನಂಟು ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಮತ್ತು ಜಮ್ಮು ಕಾಶ್ಮೀರದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಬಂಧಿಸಿದೆ.
ಐಸಿಸ್ ನಂಟು ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು ಮತ್ತು ಜಮ್ಮು ಕಾಶ್ಮೀರದಲ್ಲಿ ಎನ್‍ಐಎ ದಾಳಿ ನಡೆಸಿತ್ತು. ಉಳ್ಳಾಲದ ಮಾಜಿ ಕಾಂಗ್ರೆಸ್ ಶಾಸಕ, ಸಾಹಿತಿ ದಿವಂಗತ ಇದಿನಬ್ಬ ಅವರ ಮೊಮ್ಮಗ ಅಮರ್ ಅಬ್ದುಲ್ ರೆಹಮಾನ್, ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್, ಶ್ರೀನಗರದ ಹಮೀದ್, ಬಂಡಿಪೋರದ ಮುಜಾಮಿಲ್ ಹಸನ್ ಅವರನ್ನು ಎನ್‍ಐಎ ಬಂಧಿಸಿದೆ.
Advertisement
Advertisement
ಉಗ್ರ ಚಟುವಟಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಹಣಕಾಸು ಸಂಗ್ರಹ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರದ 5 ಕಡೆ ಎನ್‍ಐಎ ದಾಳಿ ನಡೆಸಿತ್ತು. ಶೋಧ ನಡೆಸಿದ ವೇಳೆ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಹಲವು ಸಿಮ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ಎನ್‍ಐಎ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ
Advertisement
ಬೆಳ್ಳಂಬೆಳಗ್ಗೆ ದಾಳಿ: ಇದಿನಬ್ಬ ಅವರ ಪುತ್ರನ ಮನೆಗೆ ಬುಧವಾರ ನಸುಕಿನಲ್ಲೇ ಎನ್‍ಐಎ ದಾಳಿ ನಡೆಸಿತ್ತು. ಮನೆಯಲ್ಲಿ ಇದಿನಬ್ಬ ಅವರ ಪುತ್ರ ಇಸ್ಮಾಯಿಲ್ ಬಾಷಾ ತಮ್ಮ ಕುಟುಂಬದ ಜೊತೆಗೆ ವಾಸವಿದ್ದಾರೆ.
Advertisement
ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ಕುರಿತು ನಂಟು ಇರುವ ಶಂಕೆಯಲ್ಲಿ ದಾಳಿ ನಡೆದಿದೆ. ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿತ್ತು. ಎನ್‍ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದರು.
ಮೂರು ವರ್ಷಗಳ ಹಿಂದೆ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳಾದ ಅಜ್ಮಲ್ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿತ್ತು. ಅಜ್ಮಲ್‍ಳನ್ನ ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. ಆದರೆ ಆ ಸಂದರ್ಭದಲ್ಲೇ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು. ಆ 17 ಜನರ ಪೈಕಿ ಅಜ್ಮಲ್ ಕುಟುಂಬವೂ ಇತ್ತು. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಭಾಗವಾಗಿ ಅಜ್ಮಲ್ ಅಜ್ಜ ಇಸ್ಮಾಯಿಲ್ ಭಾಷಾ ಮನೆಗೆ ಇಂದು ದಾಳಿ ನಡೆದಿದೆ.
ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರರು ವಿದೇಶದಲ್ಲಿದ್ದಾರೆ. ಇವರ ಕುಟುಂಬದವರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಗಳನ್ನು ಸಬ್ ಸ್ಕ್ರೈಬ್ ಮಾಡಿ, ಮೃದು ಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಅಲ್ಲದೆ, ಐಸಿಸ್ ಸಂಪರ್ಕ ಮತ್ತು ಜಮ್ಮು ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜೊತೆ ಮೊಬೈಲ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ವಿಚಾರಣೆಯ ಅಂತ್ಯದಲ್ಲಿ ಎಂ.ಕೆ.ಇದಿನಬ್ಬನವರ ಮೊಮ್ಮಗನನ್ನು ಎನ್‍ಐಎ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.