ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್‍ರಾಜ್ ಗೆಳೆಯ ರಿಯಾಜುದ್ದೀನ್ ಅನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಳೆದ ಅಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣಕ್ಕೆ ಪ್ರಮುಖ ಆರೋಪಿಗಳಾಗಿ ತಲೆ ಮರಿಸಿಕೊಂಡಿರುವ ಸಂಪತ್ ರಾಜ್ ಮತ್ತು ಜಾಕೀರ್ ಗೆ ಸಹಾಯ ಮಾಡಿದ ಆರೋಪದ ಮೇಲೆ ರಿಯಾಜುದ್ದೀನ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಆರೋಪಿಗಳಾದ ಸಂಪತ್‍ರಾಜ್ ಮತ್ತು ಜಾಕೀರ್ ತಲೆ ಮರಿಸಿಕೊಳ್ಳಲು ರಿಯಾಜುದ್ದೀನ್ ಸಹಾಯ ಮಾಡಿದ್ದ. ಇಬ್ಬರನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ನಾಗರಹೊಳೆಯ ಒಂದು ಫಾರ್ಮ್ ಹೌಸ್‍ಗೆ ಬಿಟ್ಟು ಬಂದಿದ್ದ. ನಂತರ ಅವರು ಅಲ್ಲಿಂದ ಬೇರೆ ಕಡೆ ಶಿಫ್ಟ್ ಆಗಿದ್ದಾರೆ. ಈ ಕಾರಣದಿಂದ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಈಗ ತಲೆ ಮರೆಸಿಕೊಂಡಿರುವ ಸಂಪತ್ ರಾಜ್ ಮತ್ತು ಜಾಕೀರ್ ನನ್ನು ಹುಡುಕುತ್ತಿದೇವೆ. ಅವರನ್ನು ಬಹಳ ಬೇಗ ಅರೆಸ್ಟ್ ಮಾಡುತ್ತೇವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.