ಬಿಜೆಪಿ ಮಾಜಿ ಶಾಸಕ ಎಚ್.ಡಿ ಬಸವರಾಜು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

Public TV
2 Min Read
BASVARAJ

ಬೆಂಗಳೂರು: ಆಮ್ ಆದ್ಮಿ ಪಕ್ಷದ ತತ್ವ, ಸಿದ್ಧಾಂತಗಳು ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ರವರ ಜನಪರ ಆಡಳಿತವನ್ನು ಮೆಚ್ಚಿ, ಸ್ವಪಕ್ಷ ಬಿಜೆಪಿಯಲ್ಲಿನ ಭ್ರಷ್ಟಾಚಾರ, ಆಂತರಿಕ ಕಿತ್ತಾಟದಿಂದ ಬೇಸತ್ತು ವಿರಾಜಪೇಟೆ ಕ್ಷೇತ್ರದ ಮಾಜಿ ಬಿಜೆಪಿ ಶಾಸಕರಾದ ಎಚ್.ಡಿ ಬಸವರಾಜುರವರು ಇಂದು ಎಎಪಿಯನ್ನು ಸೇರಿದ್ದಾರೆ.

BASAVARAJ medium

ಆಮ್ ಆದ್ಮಿ ಪಾರ್ಟಿಯು ಆರಂಭದ ದಿನದಿಂದಲೂ ಪ್ರಾಮಾಣಿಕತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ಮುನ್ನಡೆಯುತ್ತಿದೆ. ಕಳಂಕರಹಿತ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದ ಅನೇಕರು ಎಎಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ದೇಶಾದ್ಯಂತ ಅನೇಕ ಸಾಧಕರು, ಗಣ್ಯ ವ್ಯಕ್ತಿಗಳು ಹಾಗೂ ವಿವಿಧ ಪಕ್ಷಗಳು ಮುಖಂಡರು ನಮ್ಮ ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೆಂಬಲ ವ್ಯಕ್ತವಾಗಲಿದ್ದು, ಕರ್ನಾಟಕದ ಅನೇಕ ಶಾಸಕರು, ಮಾಜಿ ಶಾಸಕರು ಎಎಪಿಯನ್ನು ಸೇರಲಿದ್ದಾರೆ ಎಂದು ಬಸವರಾಜು ತಿಳಿಸಿದರು.

BASAVARJ 2 medium

ಎಚ್.ಡಿ ಬಸವರಾಜುರವರು 1994 ಮತ್ತು 2004ರಲ್ಲಿ ವಿರಾಜಪೇಟೆಯ ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡಿದ ಅನುಭವ ಹೊಂದಿದ್ದಾರೆ. 2005ರಿಂದ 2007ರವರೆಗೆ ಕರ್ನಾಟಕ ಸರ್ಕಾರ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ, 2003ರಿಂದ 2005ರ ತನಕ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆರ್ಥಿಕ ಹಾಗೂ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, 2005ರಿಂದ 2007ರವರೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾವಲು ಹಾಗೂ ನಿರ್ವಹಣೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಸ್ಕುಲಾರ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ ಚಿಕ್ಕಮಗಳೂರು ಮತ್ತು ಕೊಡಗು ಗ್ರಾಮೀಣ ಬ್ಯಾಂಕಿನ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್ 

BASAVARJ 1 medium

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಕರ್ನಾಟಕ ಅಹಿಂದ ಪರಿಷತ್‍ನ ಅಧ್ಯಕ್ಷರಾಗಿ ಬಸವರಾಜುರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ತ ಅಹಿಂದ ವರ್ಗದ, ವಿಶೇಷವಾಗಿ ಪರಿಶಿಷ್ಟ ಪಂಗಡದ ಆಶಾಕಿರಣವಾಗಿದ್ದಾರೆ. ದಲಿತರು, ಶೋಷಿತರು, ಬಡವರು, ನೊಂದವರ ಸಹಾಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಇಂತಹ ಅನುಭವಿ ಹಾಗೂ ಪ್ರಾಮಾಣಿಕ ನಾಯಕ ಎಎಪಿಯನ್ನು ಸೇರಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಎಎಪಿ ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *