– ಪ್ರೇಮಿ, ಆತನ ಪತ್ನಿಯನ್ನ ಮನೆಗೆ ಕರೆದು ಹಲ್ಲೆ ಮಾಡಿದ್ಳು
ಮೈಸೂರು: ತನಗೆ ಕೈ ಕೊಟ್ಟು ಬೇರೆ ಯುವತಿಯನ್ನು ಮದುವೆಯಾದ ಪ್ರಿಯಕರನ ಮೇಲೆ ಮಾಜಿ ಪ್ರಿಯತಮೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಇದೀಗ ಯುವಕ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಮೇಶ್ ಹಲ್ಲೆಗೊಳಗಾದ ಯುವಕ. ಉಮೇಶ್‍ನ ಮಾಜಿ ಪ್ರಿಯತಮೆ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಇದೀಗ ಐವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಮೈಸೂರು ಮೂಲದ ಉಮೇಶ್ ನಾಲ್ಕೈದು ವರ್ಷಗಳಿಂದ ಬೆಂಗಳೂರು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಇವರ ಸಂಬಂಧ ಮುರಿದು ಹೋಗಿ ಇಬ್ಬರು ಪ್ರತ್ಯೇಕವಾಗಿದ್ದರು. ಆಗಸ್ಟ್ 31ರಂದು ಉಮೇಶ್ ಬೆಂಗಳೂರು ಮೂಲದ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದನು. ಇದರಿಂದ ರೊಚ್ಚಿಗೆದ್ದ ಪ್ರಿಯತಮೆ ಬೆಂಗಳೂರಿನಲ್ಲಿ ತನ್ನ ಮನೆಗೆ ಮಾಜಿ ಪ್ರೇಮಿ ಉಮೇಶ್ ಮತ್ತು ಆತನ ಪತ್ನಿಯನ್ನು ಕರೆದಿದ್ದಳು.
ಇತ್ತ ಉಮೇಶ್ ಮಾಜಿ ಪ್ರಿಯತಮೆ ಮನೆಗೆ ಕರೆದಳು ಅಂತ ಪತ್ನಿಯನ್ನು ಕರೆದುಕೊಂಡು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲಿ ಪ್ರಿಯತಮೆ ತನ್ನ ಮಾಜಿ ಪ್ರಿಯಕರ ಉಮೇಶ್ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ದೊಡ್ಡ ಜಗಳವೇ ನಡೆದಿತ್ತು. ಈಕೆ ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೇ ವಿಚಾರದಲ್ಲಿ ಉಮೇಶ್ ಮತ್ತು ಯುವತಿಯ ನಡುವೆ ಹಲವು ಬಾರಿ ಜಗಳವಾಗಿದೆ.
ಇತ್ತೀಚೆಗೆ ಇದೇ ವಿಚಾರ ಮಾತಾಡಲು ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿಗೆ ಉಮೇಶ್‍ನನ್ನು ಕರೆಸಿದ ಯುವತಿ ತನ್ನ ಸ್ನೇಹಿತರ ಜೊತೆಗೂಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆ ಸಂಬಂಧ ಯುವತಿ ಹಾಗೂ ಆಕೆಯ ಜೊತೆಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಉಮೇಶ್ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ.