ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರಿಗೆ ಶ್ರೀಲಂಕಾದ ಕ್ಯಾಸಿನೋ ಜೊತೆ ನಂಟು ಇದೆ ಎಂಬ ಆರೋಪ ಕೇಳಿ ಬಂದ ಬಳಿಕ ಈಗ ರಾಜ್ಯದ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರಿಗೂ ಸಂಪರ್ಕವಿದೆ ಎಂಬ ಮಾತು ಕೇಳಿ ಬಂದಿದೆ.
ಹೌದು. ಕರ್ನಾಟಕದ ರಾಜಕಾರಣಿಗಳಿಗೆ ಶ್ರೀಲಂಕಾದ ಕ್ಯಾಸಿನೋ ನಂಟು ಇದೆ. ಈಗಾಗಲೇ ಪ್ರಶಾಂತ್ ಸಂಬರಗಿ ಜಮೀರ್ ಅಹಮದ್ ಹೆಸರನ್ನು ತೇಲಿಬಿಟ್ಟಿದ್ದಾರೆ. ಆದರೆ ಹಲವು ರಾಜಕಾರಣಿಗಳಿಗೆ ಲಂಕಾ ಕ್ಯಾಸಿನೋ ನಂಟು ಇದ್ದು ಅದರಲ್ಲೂ ಉದ್ಯಮಿಯಾಗಿರುವ ಮಾಜಿ ಪರಿಷತ್ ಸದಸ್ಯರ ಹೆಸರು ಈಗ ಮುನ್ನೆಲೆಗೆ ಬಂದಿದೆ.
ಈ ನಾಯಕ ಹಲವು ಬಾರಿ ಲಂಕಾಗೆ ಹೋಗಿದ್ದಾರೆ.ಈಗ ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಒಂದು ವೇಳೆ ತನಿಖೆಗೆ ಇಳಿದರೆ ಈ ನಾಯಕನಿಗೂ ಕಷ್ಟವಾಗುವ ಸಾಧ್ಯತೆಯಿದೆ.
ವಿಶೇಷ ಏನೆಂದರೆ ಈ ವ್ಯಕ್ತಿ ಮಾತ್ರ ಹೋಗುತ್ತಿರಲಿಲ್ಲ. ಈ ವ್ಯಕ್ತಿಯ ಜೊತೆ ಹಲವು ರಾಜಕೀಯ ವ್ಯಕ್ತಿಗಳು ಹೋಗುತ್ತಿದ್ದರು. ಒಂದು ವೇಳೆ ಡ್ರಗ್ಸ್ ಪ್ರಕರಣದ ಆರೋಪಿಗಳಿಗೂ ಈ ರಾಜಕೀಯ ವ್ಯಕ್ತಿಗೂ ನಂಟು ಇದೆ ಎಂಬ ಸುಳಿವು ಸಿಕ್ಕರೆ ಈ ವ್ಯಕ್ತಿಯ ಸುತ್ತ ತನಿಖೆ ತಿರುಗಲಿದೆ. ಒಂದು ವೇಳೆ ಈ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದರೆ ರಾಜ್ಯದ ಹಲವು ರಾಜಕೀಯ ನಾಯಕರಿಗೂ ಬಿಸಿ ತಟ್ಟಲಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!
ಕರ್ನಾಟಕದ ವ್ಯಕ್ತಿಗಳಿಗೆ ಗೋವಾ ಬಿಟ್ಟರೆ ಶ್ರೀಲಂಕಾ ಕ್ಯಾಸಿನೋದ ಮೇಲೆ ಮೋಹ ಜಾಸ್ತಿ. ಶ್ರೀಲಂಕಾದಲ್ಲಿ ಪ್ರೈವೆಸಿ ಜಾಸ್ತಿ. ಅಷ್ಟೇ ಅಲ್ಲದೇ ಯಾರಿಗೂ ಅಷ್ಟು ಸುಲಭವಾಗಿ ಗುರುತು ಹಿಡಿಯಲು ಆಗುವುದಿಲ್ಲ. ಹೀಗಾಗಿ ಬಹಳಷ್ಟು ಜನ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಾರೆ.
ಒಟ್ಟಿನಲ್ಲಿ ಸಿಸಿಬಿಯ ಡ್ರಗ್ಸ್ ತನಿಖೆಯ ಜೊತೆ ಕ್ಯಾಸಿನೋ ನಂಟು, ಅಕ್ರಮ ಹಣಕಾಸು ವ್ಯವಹಾರದ ವಾಸನೆ ಜೋರಾಗುತ್ತಿದೆ. ಹೀಗಾಗಿ ತನಿಖೆ ಮುಂದೆ ಹೇಗೆ ಸಾಗಲಿದೆ ಎಂಬ ಕುತೂಹಲ ಮೂಡಿದೆ.