– ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡ್ರು
ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ವೀಟಿ ಅನುಷ್ಕಾ ಶೆಟ್ಟಿಗೆ ಇಂದು ವಿಶೇಷವಾದ ದಿನವಾಗಿದೆ. ಹೀಗಾಗಿ ಇಬ್ಬರು ಸೋಶಿಯಲ್ ಮೀಡಿಯಾದ ಮೂಲಕ ಬಗ್ಗೆ ತಮ್ಮ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಹೌದು, ಇಂದು ಮಹೇಶ್ ಬಾಬು ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್ ಹಿಟ್ ‘ಖಲೇಜಾ’ ಸಿನಿಮಾ ರಿಲೀಸ್ ಆದ ದಿನ. ಇಂದಿಗೆ ಈ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗಿದೆ. ಅಕ್ಟೋಬರ್ 7, 2010ರಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿದ್ದು, ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಅನುಷ್ಕಾ ಇಬ್ಬರು ಅಭಿಮಾನಿಗಳ ಮುಂದೆ ಬಂದಿದ್ದು, ಇಬ್ಬರ ಕಾಂಬಿನೇಷನ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಸಿನಿಮಾದ ಆಕ್ಷನ್ ಮತ್ತು ಹಾಸ್ಯ ದೃಶ್ಯಗಳು ಸಿನಿಮಾ ಪ್ರಿಯರ ಮನಗೆದ್ದಿತ್ತು. ‘ಖಲೇಜಾ’ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ‘ಖಲೇಜಾ’ ಸಿನಿಮಾದ 10 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಈ ಸಂತಸವನ್ನು ನಟ ಮಹೇಶ್ ಬಾಬು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
Khaleja turns 10!! Reinvented myself as an actor!! Will remain a special one!! All thanks to my good friend and the brilliant Trivikram… Looking forward to our next… very soon ???????????? pic.twitter.com/X1aPwTGpEF
— Mahesh Babu (@urstrulyMahesh) October 7, 2020
“ಖಲೇಜಾ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಿದೆ. ನಟನಾಗಿ ನನ್ನನ್ನು ಮರುಶೋಧಿಸಿದ ಸಿನಿಮಾವಿದು. ಹೀಗಾಗಿ ಈ ಚಿತ್ರ ವಿಶೇಷವಾಗಿ ಉಳಿಯುತ್ತದೆ. ನನ್ನ ಸ್ನೇಹಿತ ಮತ್ತು ನಿರ್ದೇಶಕ ತ್ರಿವಿಕ್ರಮ್‍ಗೆ ಧನ್ಯವಾದಗಳು. ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಅಂದರೆ ನಿರ್ದೇಶಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಸುಳಿವನ್ನು ನೀಡಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಕೂಡ ಮಹೇಶ್ ಬಾಬು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದು, “ಈ ಸಿನಿಮಾದ ಸಾಕಷ್ಟು ನೆನಪುಗಳಿವೆ. ಮಹೇಶ್ ಬಾಬು, ತ್ರಿವಿಕ್ರಮ್ ಅವರಿಗೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ನಟಿ ಅನುಷ್ಕಾ ಇತ್ತೀಚಿಗೆ ‘ನಿಶಬ್ದಂ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈಗ ವಿಜಯ್ ದೇವರಕೊಂಡ ಮತ್ತು ಅನುಷ್ಕಾ ಮುಂದಿನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.