ಮೈಸೂರು: ಬ್ಯಾಂಕ್‍ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಹಲವು ಮಹಿಳೆಯರಿಂದ ಹಣ ಕಟ್ಟಿಸಿಕೊಂಡ ವಂಚಕಿಯೊಬ್ಬಳು ಸುಮಾರು 70 ಲಕ್ಷ ರೂ. ಹಣದೊಂದಿಗೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಸಾತಗಳ್ಳಿ ಒಂದನೇ ಹಂತದ ಬಡಾವಣೆಯಲ್ಲಿ ಒಂದು ವರ್ಷದ ಹಿಂದೆ ಬಾಡಿಗೆ ಮನೆಗೆ ಬಂದಿದ್ದ ಹೇಮಲತಾ ಎಂಬಾಕೆಯೇ ವಂಚಕಿ. ಸುಮಾರು 20 ಮಹಿಳೆಯರನ್ನು ವಂಚಿಸಿ ಹಣ ಪಡೆದು ಪರಾರಿಯಾಗಿದ್ದಾಳೆ.
ಹೇಮಲತಾ(40) ತನ್ನ ನಯವಾದ ಮಾತುಗಳಿಂದಲೇ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಳು. ಸದಾ ದೇವರ ಧ್ಯಾನ, ಧಾರ್ಮಿಕ ಕಾರ್ಯಗಳನ್ನು ನಡೆಸಿ ತಾನು ಪ್ರಾಮಾಣಿಕ ಮಹಿಳೆ ಎಂದು ಬಿಂಬಿಸಿ ಕೊಂಡಿದ್ದಳು. ಮೊದಲಿಗೆ ಚೀಟಿ ಆರಂಭಿಸಿದ ಆಕೆ, ಸಾಕಷ್ಟು ಮಹಿಳೆಯರಿಂದ ಹಣ ಕಟ್ಟಿಸಿಕೊಂಡು ಕಾಲಕ್ಕೆ ಸರಿಯಾಗಿ ಚೀಟಿ ಹಣ ಪಾವತಿಸಿ ನಂಬಿಕೆ ಸಂಪಾದಿಸಿದ್ದಳು.
ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಅಧಿಕಾರಿಗಳಿಗೆ ಕಮೀಷನ್ ಕೊಡಬೇಕು ಎಂದು ಹೇಳಿ ಹಣ ಪಡೆದಿದ್ದಳು. ಗಂಡ ಹಾಗೂ ಕುಟುಂಬಸ್ಥರಿಗೆ ತಿಳಿಸದೇ ಮಹಿಳೆಯರು ಹಣ ಕೊಟ್ಟಿದ್ದಾರೆ. ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಂದ ಲಕ್ಷಾಂತರ ರೂ. ಪಡೆದಿದ್ದಾಳೆ. ನಂತರ ಸುಮಾರು 70 ಲಕ್ಷ ರೂ. ಸಂಗ್ರಹವಾಗುತ್ತಿದ್ದಂತೆ ಮೂರು ದಿನಗಳ ಹಿಂದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾಳೆ. ಸದ್ಯ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೀಗ ಹಾಕಿ ಮದುವೆಗೆ ಹೋದವರ ಮನೆಯಲ್ಲಿ ಕಳ್ಳರ ಕೈಚಳಕ