ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಗುರುವಾರ ನಡೆಯುವ ಶಿವರಾತ್ರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಶೇಷ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
Advertisement
ಕೋವಿಡ್ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕಿದೆ. ಜೊತೆಗೆ ಕಡ್ಡಾಯವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಯಿದ್ದು, ಪುರುಷರು ಕಡ್ಡಾಯವಾಗಿ ಪಂಚೆ, ಶಲ್ಯವನ್ನು ಧರಿಸಬೇಕಿದೆ. ಇನ್ನು ಮಹಿಳೆಯರು ಷಾಟ್ರ್ಸ್, ಟೀ ಶರ್ಟ್ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.
Advertisement
Advertisement
ದೇವಸ್ಥಾನದ ಗರ್ಭಗುಡಿಯು ಮುಂಜಾನೆ 3 ಘಂಟೆಗೆ ತೆರೆಯಲಿದೆ. ಆತ್ಮಲಿಂಗಕ್ಕೆ ವಿಶೇಷ ಪೂಜೆ ನಂತರ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.
Advertisement
ವಿಶೇಷ ಪೂಜೆಗಳು:
ನವಧಾನ್ಯ ವಿಶೇಷ ಪೂಜೆ, ಗಣೇಶ ಪೂಜೆ, ಧ್ವಜಾರೋಹಣ, ಮೃತಿಕಾಹರಣೋತ್ಸವ ಭೂತಬಲಿ, ಸ್ಥಾನ ಶುದ್ಧ್ಯಾದಿ ಹವನಾನುಷ್ಠಾನ, ಗಜವಾಹನಯಂತ್ರೋತ್ಸವ ಭೂತಬಲಿ, ಕಲಾಶಕ್ತ್ಯಾದಿ ಹವನ, ಹಂಸವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ಭೂತಬಲಿ, ಸಿಂಹವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ಭೂತಬಲಿ, ಪುಷ್ಪರತೋತ್ಸವ ಶಿವಯೋಗದ ಮಹಾಪರ್ವ ಮಹಾಕುಂಭಾಭಿಷೇಕ ಪೂರ್ವಕ ಪಂಚಾಮೃತಾಭಿಷೇಕ, ಭೂತಬಲಿ ಜಲಯಾನೋತ್ಸವ, ದೀಪೋತ್ಸವ, ಮಯೂರ ಯಂತ್ರೋತ್ಸವ, ಶ್ರೀಮನ್ಮಹಾರಥೋತ್ಸವ, ಮೃಗಯಾತ್ರೆ, ಗ್ರಾಮಬಲಿ ಚೂರ್ಣೋತ್ಸವ, ಅವಭೃಥ, ಜಲಾಯನೋತ್ಸವ, ಮಹಾಪೂರ್ಣಾವತಿ ಅಂಕುರಾರ್ಪಣೆ, ದೀಪೋತ್ಸವ ಅಂಕುರ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಶಿವರಾತ್ರಿ ವಿಶೇಷ ರಥೋತ್ಸವ
ಮಹಾರಥೋತ್ಸವವು ಮಾ.14ರಂದು ನಡೆಯಲಿದ್ದು, ಶಿವರಾತ್ರಿ ಅಂಕುರ ಪ್ರಸಾದ ಮಾ.15ರಂದು ನಡೆಯಲಿದೆ. ಮಾ.19ರಂದು ರಥ ಸಪ್ತಮಿಯಂದು ಮಹಾರಥದ ‘ಗಡ್ಡೆ’ ಹೊರತೆಗೆಯುವ ಕಾರ್ಯಕ್ರಮ ನೆರವೇರಲಿದೆ.
ಭಕ್ತರ ಸಂಖ್ಯೆಯಲ್ಲಿ ಇಳಿಕೆ
ಪ್ರತಿ ವರ್ಷ ಶಿವರಾತ್ರಿಯ ಹಿಂದಿನ ದಿನದಂದು ಸಾವಿರಾರು ಭಕ್ತರು ಗೋಕರ್ಣಕ್ಕೆ ಬಂದು ತಂಗುತ್ತಾರೆ. ಸೂರ್ಯ ಉದಯದ ಸಂದರ್ಭದಲ್ಲಿ ಸಮುದ್ರ ತೀರಕ್ಕೆ ತೆರಳಿ ಗಂಗಾ ಸ್ನಾನ ಮಾಡಿ, ಮರಳಿನ ಮೂಲಕ ವಿಶೇಷ ಶಿವನ ‘ಲಿಂಗ’ ಪೂಜೆ ಮಾಡುವುದು ವಾಡಿಕೆ. ಆದರೆ ಈ ವರ್ಷ ಕರೊನಾ ಮಹಾ ಮಾರಿ ಹಿನ್ನೆಲೆ ಹೆಚ್ಚು ಜನ ಆಗಮಿಸಿಲ್ಲ. ಹೀಗಾಗಿ ಗಿಜಿಗುಡಬೇಕಿದ್ದ ಗೋಕರ್ಣ ಖಾಲಿ ಹೊಡೆಯುತಿದ್ದು, ಸ್ಥಳೀಯರು ಮಾತ್ರ ಕಾಣಸಿಗುತಿದ್ದಾರೆ.
ಗೋಕರ್ಣದ ರೆಸಾರ್ಟ್, ವಸತಿ ಗೃಹಗಳು ಪ್ರವಾಸಿಗರು ಹಾಗೂ ಶಿವಭಕ್ತರ ಸಂಖ್ಯೆ ವಿರಳತೆಯಿಂದ ಹಲವು ಕಡೆ ಖಾಲಿ ಹೊಡೆಯುತ್ತಿದೆ. ಸ್ಥಳೀಯರು ಹೇಳುವಂತೆ ಈ ಬಾರಿ ಶಿವರಾತ್ರಿಯ ಹಿಂದಿನ ದಿನವಾಗಿದ್ದರೂ, ಶಿವ ದರ್ಶನಕ್ಕೆ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಶಿವರಾತ್ರಿ ದಿನವೂ ಕಡಿಮೆ ಆಗಲಿದೆ ಎನ್ನುತಿದ್ದಾರೆ.