ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಹಾರಾಷ್ಟ್ರ ಕಂಟಕ ಎದುರಾಗಿದ್ದು, ಒಂದೇ ದಿನ 45 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.
ಅಂದಹಾಗೆ ಮಹಾರಾಷ್ಟ್ರದಿಂದ ಸುಮಾರು 250 ಮಂದಿ ಜಿಲ್ಲೆಗೆ ಆಗಮಿಸಿದ್ದು, ಮೊದಲ ಹಂತದಲ್ಲಿ 45 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಗೌರಿಬಿದನೂರು ತಾಲೂಕಿನ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಇವರನ್ನ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ 45 ಮಂದಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ 45 ಮಂದಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಕೋವಿಡ್ 19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
Advertisement
Advertisement
ಇದರಲ್ಲಿ ಒಂದು ವರ್ಷದ ಮಗು ಹಾಗೂ ತಾಯಿಗೂ ಕೊರೊನಾ ಸೋಂಕು ತಗುಲಿದೆ. ಅಂದಹಾಗೆ ಇವರೆಲ್ಲರೂ ಮೂಲತಃ ಗೌರಿಬಿದನೂರು ತಾಲೂಕಿನವರಾಗಿದ್ದು, ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರು. ಆದರೆ ಈಗ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಲ್ಲಿಂದ ಖಾಸಗಿ ಬಸ್‍ಗಳ ಮೂಲಕ ತವರು ಜಿಲ್ಲೆಗೆ ಆಗಮಿಸಿದರು. ಗೌರಿಬಿದನೂರು ತಾಲೂಕಿನವರನ್ನ ವಾಜಪೇಯಿ ವಸತಿ ಶಾಲೆ ಹಾಗೂ ಬಾಗೇಪಲ್ಲಿ ತಾಲೂಕಿನವರನ್ನ ಜಿ.ಮದ್ದೇಪಲ್ಲಿ ಬಳಿ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
Advertisement
Advertisement
ಮೊದಲ ಹಂತದಲ್ಲಿ 179 ಮಂದಿಯನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 90 ಮಂದಿಯ ಕೊರೊನಾ ಟೆಸ್ಟ್ ಮುಗಿದಿದ್ದು, ಇವರಲ್ಲಿ 45 ಮಂದಿಗೆ ಸೋಂಕು ದೃಢವಾಗಿದೆ. ಉಳಿದ 89 ವರದಿ ಇನ್ನೂ ಬರಬೇಕಿದೆ. ಇವರಲ್ಲೂ ಸಹ ಬಹುತೇಕರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಇದಲ್ಲದೆ ಗುರುವಾರ ತಡರಾತ್ರಿ ಸಹ ಮಹಾರಾಷ್ಟ್ರದಿಂದ ಚಿಕ್ಕಬಳ್ಳಾಪುರಕ್ಕೆ 50 ಮಂದಿ ಆಗಮಿಸಿದ್ದು, ಅವರನ್ನ ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಬಳಿಯ ವಿಟಿಯುನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಸದ್ಯ ಹಳೆಯ 26 ಪ್ರಕರಣಗಳು ಹಾಗೂ ಇಂದಿನ ಹೊಸದಾದ 45 ಪ್ರಕರಣಗಳು ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 71ಕ್ಕೆ ಏರಿದೆ. ಸಂಜೆ ವರದಿಯಲ್ಲಿ ಮತ್ತಷ್ಟು ಪ್ರಕರಣಗಳು ಬರುವ ಸಾಧ್ಯತೆಯಿದೆ.