ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಸರ್ಕಾರ ಹಂತ ಹಂತವಾಗಿ ರಾಜ್ಯವನ್ನು ಅನ್‍ಲಾಕ್ ಮಾಡುತ್ತಿದೆ. ಜುಲೈ 5ರ ಬಳಿಕ ಮತ್ತಷ್ಟು ಕ್ಷೇತ್ರಗಳಿಗೆ ಸರ್ಕಾರ ರಿಯಾಯಿತಿ ನೀಡಲು ಸಮಾಲೋಚನೆ ಮಾಡುತ್ತಿದೆ.
ಈ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ರೂಪಾಂತರಿ ಡೆಲ್ಟಾ ವೈರಸ್ ಕಾಟ ಶುರುವಾಗಿದೆ. ಒಂದೇ ದಿನದಲ್ಲಿ 200ಕ್ಕೂ ಅಧಿಕ ಜನರಲ್ಲಿ ಡೆಲ್ಟಾ ವೈರಸ್ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಈ ನಡುವೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಪ್ರತಿನಿತ್ಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಟ್ರೈನ್ ಮೂಲಕ ಸಾವಿರಾರು ಜನ ಬರ್ತಿದ್ದಾರೆ.
ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ 72 ಗಂಟೆಯ ಒಳಗಡೆ ಮಾಡಿಸಿರುವ ಕೋವಿಡ್ ಟೆಸ್ಟ್ ರಿಪೋರ್ಟ್ ತರಬೇಕು ಅಥವಾ 1 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತೋರಿಸಬೇಕು ಎಂದು ಸೂಚಿಸಿದೆ. ಆದರೆ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಸಾವಿರಾರು ಜನ ಯಾವ ರಿಪೋರ್ಟ್ ಕೂಡ ತರದೇ ಬರುತ್ತಿದ್ದಾರೆ.
ಸರ್ಕಾರ ಮತ್ತು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಕೋವಿಡ್ ಟೆಸ್ಟಿಂಗ್ ಕ್ಯಾಂಪ್ ಕೂಡ ಮಾಡುತ್ತಿದ್ದಾರೆ. 1,000 ದಿಂದ 1,400 ಜನ ಒಂದು ಟ್ರೈನ್‍ನಲ್ಲಿ ಬಂದರೆ ಕೇವಲ 100 ರಿಂದ 150 ಜನ ಮಾತ್ರ ಕೋವಿಡ್ ಟೆಸ್ಟ್‌ಗೆ ಒಳಪಡುತ್ತಿದ್ದಾರೆ. ಒಂದು ಕಡೆ ಮಹಾರಾಷ್ಟ್ರದಿಂದ ಬರುವಾಗ ಕೋವಿಡ್ ಟೆಸ್ಟ್ ರಿಪೋರ್ಟ್ ತರುತ್ತಿಲ್ಲ. ಇಲ್ಲಿ ಕೂಡ ಟೆಸ್ಟಿಂಗ್ ಮಾಡಿಸಿಕೊಳ್ಳುತ್ತಿಲ್ಲ.
ಇದರಿಂದಾಗಿ ರಾಜ್ಯಕ್ಕೆ ಮಹಾಕಂಟಕ ಶುರುವಾಗಲಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಅಲ್ಲಿಂದ ಬರುವವರು ರಾಜ್ಯದಲ್ಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು ಸರ್ಕಾರ ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ 7 ಮಂದಿ ಯುವಕರಿಂದ ನಿರಂತರ ಅತ್ಯಾಚಾರ