ಮಹಾರಾಷ್ಟ್ರದಲ್ಲಿ ವರುಣಾರ್ಭಟ, ಕರ್ನಾಟಕದಲ್ಲಿ ಜಲತಾಂಡವ – ವರುಣನ ರೌದ್ರಾವತಾರಕ್ಕೆ ರಾಜ್ಯದಲ್ಲಿ 6 ಮಂದಿ ಬಲಿ

Public TV
4 Min Read
RAIN 11

ಬೆಂಗಳೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸಿರಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜಲತಾಂಡವ ಎದುರಾಗಿದೆ. ಈಗಾಗಲೇ ಭಾರೀ ಮಳೆಗೆ ರಾಜ್ಯದಲ್ಲಿ ಒಟ್ಟು 6 ಮಂದಿ ಬಲಿಯಾಗಿದ್ದಾರೆ.

BLG RAIN 6

ಉತ್ತರ ಕನ್ನಡದಲ್ಲಿ ಇಬ್ಬರು, ಬೆಳಗಾವಿಯಲ್ಲಿ ಇಬ್ಬರು ಮಹಾಮಳೆಗೆ ಬಲಿಯಾಗಿದ್ದಾರೆ. ಹಾಗೆಯೇ ಚಿಕ್ಕಮಗಳೂರು, ದಾವಣಗೆರೆಯಲ್ಲಿ ಮಳೆಗೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ, ಹಳ್ಳ, ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಗಳು ಜಲಾವೃತಗೊಂಡಿವೆ. ದೇಗುಲ, ಮನೆಗಳು ಮುಳುಗಡೆಯಾಗಿವೆ. ಹಳ್ಳಿಗಳು ದ್ವೀಪದಂತಾಗಿದ್ದು, ಜನ ಪರದಾಡುತ್ತಿದ್ದಾರೆ.

BLG RAIN

ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಕಾರಣ ಕೊಯ್ನಾ, ರಾಧಾನಗರಿ, ಕಳಂಬ ಡ್ಯಾಂಗಳಿಂದ ರಾಜ್ಯಕ್ಕೆ ಹರಿದುಬರ್ತಿರುವ ನೀರಿನಿಂದ ಇಡೀ ಬೆಳಗಾವಿ ಜಿಲ್ಲೆ ಹೆಚ್ಚು ಕಡಿಮೆ ಜಲದಿಗ್ಬಂಧನದಲ್ಲಿ ಸಿಲುಕಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಮತ್ತೆ ಮಹಾಪ್ರವಾಹದ ಭೀತಿ ಎದುರಾಗಿದೆ. ವೇದಗಂಗಾ ನದಿ ಪ್ರವಾಹಕ್ಕೆ ನಿಪ್ಪಾಣಿ ತಾಲೂಕು ಸಿಲುಕಿದೆ. ಇಲ್ಲಿನ ಕೊಡಣಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಈ ಕೊಡಣಿ ಗ್ರಾಮದಲ್ಲಿ ಸಿಲುಕಿದ್ದ 200 ಜನರನ್ನು ರಕ್ಷಣೆ ಮಾಡಲಾಗಿದೆ.

BLG RAIN 4

ಮಳೆಗೆ ಬೆಳಗಾವಿ ಜಿಲ್ಲೆ ತತ್ತರಿಸಿ ಹೋಗ್ತಿದೆ. ಬೆಳಗಾವಿ ಗಡಿಯ ಪಂಚಗಂಗಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿ ನೀರಿನ ರಭಸಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಲಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ 19 ಮಂದಿಯನ್ನು ರಕ್ಷಿಸಲಾಗಿದೆ. ಗೋವಾ – ಬೆಳಗಾವಿ ರಸ್ತೆ ಸಂಚಾರ ಸ್ಥಗಿತವಾಗಿದ್ದು, ಅಂಬೋಲಿಯಲ್ಲಿ ಗುಡ್ಡ ಕುಸಿತವಾಗಿದೆ. ನದಿ ಪಾತ್ರದ ಜನರಿಗೆ ನದಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಜೋರು ಮಳೆ ಆಗ್ತಿದ್ದು ಬೆಳಗಾವಿಯ ಹಿರಣ್ಯ ಕೇಶಿ ನದಿ ತುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ತಲುಪಿದ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಸೂಚಿಸಲಾಗಿದೆ.

BLG RAIN 2

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದ್ರಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಖಾನಾಪುರ ಪಟ್ಟಣದ ಹೊರವಲಯದ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಮೀನಿನ ಮಾರುಕಟ್ಟೆಯೂ ಜಲಮಯವಾಗಿದೆ. ಖಾನಾಪುರ ಪಟ್ಟಣದ ಕೆಎಸ್‍ಆರ್‍ಪಿ ತರಬೇತಿ ಕೇಂದ್ರದ ಮೈದಾನ ಜಲಾವೃತವಾಗಿದೆ. ಅಲ್ಲದೇ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಎದುರಿನ ಪ್ರದೇಶವೂ ಸಂಪೂರ್ಣ ಜಲಮಯವಾಗಿದೆ. ಖಾನಾಪುರ ಪಟ್ಟಣದಲ್ಲಿ ನೀರಿನ ರಭಸಕ್ಕೆ ಸಿಲುಕಿದವರನ್ನು ರಕ್ಷಿಸಲಾಗಿದೆ. ಜೆಸಿಬಿ ಮೂಲಕ ಲಾರಿಯಲ್ಲಿರುವ ಜನರನ್ನು ರಕ್ಷಣೆ ಮಾಡಲಾಗಿದೆ.

BLG RAIN 1

ಕಳೆದ ಮೂರು ದಿನಗಳಿಂದ ಭಾರೀ ಮಳೆ ಆಗ್ತಿದ್ದು ನದಿ ಹಳ್ಳ-ಕೊಳ್ಳ ಜಲಾಶಯ ಭರ್ತಿ ಆಗಿದೆ. ಬೆಳಗಾವಿಯ ವಾಘವಡೆ ಗ್ರಾಮದ ಬಳಿ ಬಳ್ಳಾರಿನಾಲಾ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಲಾಗಿದೆ. ರೈತ ರಾಹುಲ್ ಪಾಟೀಲ ಗದ್ದೆಗೆ ಹೋಗಿ ಬರುತ್ತಿದ್ದಾಗ ಏಕಾಏಕಿ ನಾಲಾ ನೀರಿನ ರಭಸಕ್ಕೆ ಸಿಲುಕಿದ್ದರು. ಭಾರೀ ಮಳೆಯಿಂದಾಗಿ ಬೆಳಗಾವಿಯ ನಿಪ್ಪಾಣಿ ತಾಲೂಕಿನ ಕೊಡಣಿ ಗ್ರಾಮ ಜಲಾವೃತವಾಗಿದೆ. ಕೊಡಣಿ ಗ್ರಾಮ ನಡುಗಡ್ಡೆಯಾದ ಪರಿಣಾಮ ಗ್ರಾಮದಲ್ಲಿ ಸಿಲುಕಿಕೊಂಡ 300 ಹೆಚ್ಚು ಜನರ ರಕ್ಷಣಾ ಕಾರ್ಯಾಚರಣೆಗೆ ಎನ್‍ಡಿಆರ್‍ಎಫ್ ತಂಡ ಹರಸಾಹಸ ಪಡ್ತಿದೆ.

BLG RAIN 5

ಬೆಳಗಾವಿ ಹೊರವಲಯದ ಯಮನಾಪುರ ಬಳಿ ಹೆದ್ದಾರಿ ಜಲಾವೃತವಾಗಿದ್ದು, ಹೆದ್ದಾರಿಯ ನೀರಿನಲ್ಲಿ ಲಾರಿಯೊಂದು ಸಿಲುಕಿಕೊಂಡಿತ್ತು. ಹೆದ್ದಾರಿ ಮಾರ್ಗವಾಗಿ ಸಂಚರಿಸುವ ವಾಹನಗಳ ಪರದಾಡುವಂತಾಗಿದೆ. ಸರ್ವಿಸ್ ರಸ್ತೆಯಲ್ಲೇ ಕಿಲೋಮೀಟರ್‍ಗಟ್ಟಲೇ ವಾಹನಗಳು ನಿಂತಲೇ ನಿಂತಿವೆ. ಭಾರೀ ಮಳೆಯಿಂದಾಗಿ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಠಗಲ್ಲಿ ಸಂಪೂರ್ಣ ಜಲಾವೃತವಾಗಿದೆ. ಮಠಗಲ್ಲಿಯ ಐತಿಹಾಸಿಕ ಶಂಕರಲಿಂಗ ದೇವಸ್ಥಾನ ಜಲಮಯವಾಗಿದೆ.

BLG RAIN 3

ರಾಷ್ಟ್ರೀಯ ಹೆದ್ದಾರಿ 4ರ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ಬಳಿ ಗುಡ್ಡ ಕುಸಿತವಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು ರಸ್ತೆ ಅಕ್ಕಪಕ್ಕದ ಬೆಟ್ಟದಲ್ಲಿ ಮಿನಿ ಜಲಪಾತ ಸೃಷ್ಟಿ ಆಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತದೆ. ಹೀಗಾಗಿ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ನಂದಗಡ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನಂದಗಡ ಗ್ರಾಮದ ಹೊರವಲಯದಲ್ಲಿ ಕೃಷಿ ಜಮೀನು ಜಲಾವೃತವಾಗಿದೆ. ಇದರಿಂದಾಗಿ ಖಾನಾಪುರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿದೆ. ಇದ್ರಿಂದ ಗೋಕಾಕ್ ಫಾಲ್ಸ್ ಬೋರ್ಗೆರೆಯುತ್ತಿದೆ. ಬೆಳಗಾವಿ ಗೋವಾ ಗಡಿಯಲ್ಲಿ ಭಾರಿ ಮಳೆ ಆಗ್ತಿದ್ದು ಮುಂದಿನ ದಾರಿ ಕಾಣದೇ ವಾಸ್ಕೋಡಗಾಮ ರೈಲು ನಿಂತಲ್ಲೇ ನಿಂತು ಬಿಟ್ಟಿದೆ. ದೂದ್ ಸಾಗರದ ಅಬ್ಬರಕ್ಕೆ ಮೋಡ ಕವಿದಂತೆ ದಾರಿಯೇ ಕಾಣುತ್ತಿಲ್ಲ. ವೇದಗಂಗಾ ನದಿ ಉಕ್ಕಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಬಂದ್ ಆಗಿದೆ. ನಿಪ್ಪಾಣಿ ತಾಲೂಕಿನ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿರುವ ನೀರು ನುಗ್ಗಿದೆ. ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಗಾವಿಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ವಡಗಾಂವಿಯ ಕೇಶವ ನಗರದಲ್ಲಿ 50ಕ್ಕೂ ಹೆಚ್ಚು ಮನೆಗಳು ಜಲಾವೃತ ಆಗಿದೆ. ಮನೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದು ಜನರು ಹೊರಗೆ ಬರಲಾಗದೇ ಪರದಾಡುವಂತಾಗಿದೆ. ಕೆಲವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಇನ್ನು ಕೆಲವರು ಮನೆಯಿಂದ ನೀರನ್ನು ಹೊರ ಹಾಕುವುದರಲ್ಲಿ ನಿರತರಾಗಿದ್ರು.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಹಲವು ಗ್ರಾಮಗಳು ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನ ಕೋಡಲಿ ಹಾಗೂ ಯಮಗರಣಿ ಗ್ರಾಮಗಳು ಜಲಾವೃತಗೊಂಡ ಪರಿಣಾಮ ಜನರ ರಕ್ಷಣಾ ಕಾರ್ಯಾಚರಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಆದ್ರೆ ಸಂತ್ರಸ್ತರನ್ನ ರಕ್ಷಣೆ ಮಾಡಿ ಶಾಲೆಯಲ್ಲಿ ಆಶ್ರಯ ನೀಡಿರುವ ಸರ್ಕಾರ ಮಾತ್ರ ಸಂತ್ರಸ್ತರಿಗೆ ಮಾತ್ರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಯಮಗರಣಿ ಗ್ರಾಮದ 25ಕ್ಕೂ ಹೆಚ್ಚು ಕುಟುಂಬಗಳನ್ನ ಸರ್ಕಾರಿ ಶಾಲೆಗೆ ಸ್ಥಳಾಂತರ ಮಾಡಿರುವ ಜಿಲ್ಲಾಡಳಿತ ಸಂತ್ರಸ್ತರಿಗೆ ಊಟ ನೀರಿನ ವ್ಯವಸ್ಥೆ ಮಾಡಿದ್ರೆ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಬಂದಿರುವ ಸಂತ್ರಸ್ತರಿಗೆ ಉಡಲು ಬಟ್ಟೆ ಸಹ ಇಲ್ಲದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *