– ಗುಜರಾತ್‍ನಲ್ಲಿ ಲಾಕ್‍ಡೌನ್ ವದಂತಿ
ಮುಂಬೈ: ಕೋವಿಡ್ ಸೋಂಕು ಸ್ಫೋಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‍ಡೌನ್ ಆಗುವ ಸಾಧ್ಯತೆ ಇದೆ. 8 ರಿಂದ 15 ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಮಾಡುವ ಸುಳಿವನ್ನ ಸಿಎಂ ಉದ್ಧವ್ ಠಾಕ್ರೆ ನೀಡಿದ್ದಾರೆ.
ಸೋಂಕು ಹಬ್ಬುವಿಕೆ ತಡೆಗೆ ಮತ್ತಷ್ಟು ಕಠಿಣ ಕ್ರಮ ಜಾರಿ ಸಂಬಂಧ ಸರ್ವಪಕ್ಷಗಳ ಸಭೆಯಲ್ಲಿ ಮಾತಾಡಿದ ಸಿಎಂ ‘ಒಂದು ವೇಳೆ ಇವತ್ತು ಲಾಕ್‍ಡೌನ್ ಮಾಡದೇ ಹೋದರೆ ನಾಳೆ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬರುತ್ತದೆ’ ಎಂದಿದ್ದಾರೆ. ಲಾಕ್‍ಡೌನ್ ಬದಲಾಗಿ ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ. ಕೊರೊನಾ ಚೈನ್ ಬ್ರೇಕ್ ಮಾಡೋದು ಅವಶ್ಯಕ. ಲಸಿಕೆ ಪಡೆದವರಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತೀರೋದು ಆತಂಕಕ್ಕೆ ಕಾರಣವಾಗಿದೆ.
ಸರ್ವಪಕ್ಷ ಸಭೆಯಲ್ಲಿ ಉತ್ತಮ ಸಲಹೆಗಳು ಬಂದಿವೆ. ಜನರಿಗೆ ಸ್ವಲ್ಪ ಕಷ್ಟವಾಗಲಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೆಲ ನಿರ್ಣಯಗಳನ್ನ ತೆಗೆದುಕೊಳ್ಳುವುದು ಅನಿವಾರ್ಯ. ಎಲ್ಲರೂ ರಸ್ತೆಗಿಳಿಯುತ್ತಿದ್ದರೆ, ಕೊರೊನಾ ನಿಯಂತ್ರಣ ಹೇಗೆ ಸಾಧ್ಯ. ಎರಡ್ಮೂರು ದಿನಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಯಲಿದೆ ಎಂದರು.
ಆದರೆ ಮತ್ತೆ ಲಾಕ್‍ಡೌನ್ ಜಾರಿಯಾದರೆ ಜನಾಕ್ರೋಶ ಉಂಟಾಗಬಹುದು. ವ್ಯಾಪಾರ ವ್ಯವಹಾರ ಬಂದ್ ಆಗುತ್ತದೆ. ಆ ಬಗ್ಗೆ ಯೋಚಿಸಿ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಮೈತ್ರಿಕೂಟದಲ್ಲೂ ಲಾಕ್‍ಡೌನ್ ಪರ ವಿರೋಧಗಳು ಹೆಚ್ಚಿವೆ. ತಜ್ಞರ ಜೊತೆಗೆ ಲಾಕ್‍ಡೌನ್ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ. ಇತ್ತ ಕೋವಿಡ್ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಗುಜರಾತ್‍ನಲ್ಲೂ ಮತ್ತೆ ಲಾಕ್‍ಡೌನ್ ಆಗಬಹುದು ಎಂಬ ವದಂತಿ ಹಬ್ಬಿದೆ. ಹೀಗಾಗಿ ಕಳೆದ ಲಾಕ್‍ಡೌನ್ ವೇಳೆ ಪಟ್ಟ ಕಷ್ಟ ಈ ಬಾರಿ ಪಡುವುದು ಬೇಡ ಎಂದು ಈಗಲೇ ಗುಜರಾತ್‍ನಿಂದ ತಮ್ಮ ತವರು ರಾಜ್ಯಗಳಿಗೆ ವಾಪಸ್ ಹೋಗುತ್ತಿದ್ದಾರೆ.