ಮಡಿಕೇರಿ: ಕಳೆದ ಬಾರಿಯ ಮಹಾಮಳೆಗೆ ಕಿರು ಸೇತುವೆಯೊಂದು ಕೊಚ್ಚಿ ಹೋಗಿದ್ದು, ಎರಡು ವರ್ಷಗಳು ಕಳೆದರೂ ಇನ್ನೂ ಕಾಯಕಲ್ಪ ದೊರೆತಿಲ್ಲ. ಇದೀಗ ಮತ್ತೆ ಮಳೆಗಾಲ ಪ್ರಾರಂಭವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೇರೂರು ಗ್ರಾಮದ ಪಂದೇಟು ನಿವಾಸಿಗಳು ಸೇತುವೆ ಇಲ್ಲದೆ ಪರದಾಡುತ್ತಿದ್ದು, ಮಳೆ ಸುರಿಯಲು ಆರಂಭಿಸಿದರೆ ಏನು ಗತಿ ಎಂದು ಆತಂಕಗೊಂಡಿದ್ದಾರೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಕಾಲೊನಿ ಹಾಗೂ ಪುಲಿಕೋಟು ಗ್ರಾಮಸ್ಥರ ಸಂಚಾರಕ್ಕೆ ಈ ಸೇತುವೆ ಅನುಕೂಲಕರವಾಗಿದೆ. ಪಂದೇಟ್ ಬಳಿ ನಿರ್ಮಿಸಲಾಗಿದ್ದ ಈ ಕಿರು ಸೇತುವೆ ಸ್ಥಂಭಗಳಿಲ್ಲದೇ ಕಳೆದ ವರ್ಷದ ಮಹಾಮಳೆಗೆ ಕೊಚ್ಚಿ ಹೋಗಿತ್ತು. ಸೇತುವೆ ದುರಸ್ತಿ ಮಾಡದ ಕಾರಣ, ಈ ಭಾಗದ ಶಾಲಾ-ಕಾಲೇಜು ಮಕ್ಕಳು ಹಾಗೂ ಸ್ಥಳೀಯರಿಗೆ ತೊಂದರೆಯಾಗಿದೆ.
Advertisement
Advertisement
ಮೂರು ವರ್ಷದ ಹಿಂದೆ ಪೇರೂರು ಗ್ರಾಮದ ಪಂದೇಟು ಕಡವು ಕಾಲುಸೇತುವೆ ಕೊಚ್ಚಿ ಹೋಗಿದ್ದು, ತಂಡ್ರ ಹೊಳೆಗೆ ಎರಡು ಸೇತುವೆ ನಿರ್ಮಿಸಲಾಗಿತ್ತು. ಕಳೆದ ವರ್ಷದ ಮಹಾಮಳೆಗೆ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದೆ. ಗ್ರಾಮಸ್ಥರು ಈ ಸೇತುವೆ ಮೂಲಕ ಒಂದು ಕಿ.ಮೀ. ಕ್ರಮಿಸಿ ಮುಖ್ಯರಸ್ತೆ ತಲುಪಬಹುದಿತ್ತು. ಈಗ 5 ಕಿ.ಮೀ. ಸುತ್ತಿ ಬರಬೇಕು. ಸೇತುವೆ ಕೊಚ್ಚಿ ಹೋಗಿ ಎರಡು ವರ್ಷ ಕಳೆದರೂ ಈ ವರೆಗೆ ಕಾಮಗಾರಿ ಕೈಗೊಂಡಿಲ್ಲ. ಮುಂಗಾರು ಹಿಡಿಯುವ ಮುನ್ನ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ನನ್ನ ಆರೋಗ್ಯ ಸಹ ಹದಗೆಟ್ಟಿದೆ. ತಿಂಗಳಿಗೊಮ್ಮೆ ರಕ್ತ ಪಡೆಯಬೇಕಾಗಿದೆ. ಸೇತುವೆ ಇಲ್ಲದೆ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸ್ಥಳೀಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.
Advertisement
ಈ ಹಿಂದೆಯೇ ಸೇತುವೆ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರಾಗಿತ್ತು. ಕೊರೊನಾ ಲಾಕ್‍ಡೌನ್‍ನಿಂದಾಗಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದ್ದು, ಮಂಜೂರಾಗಿದ್ದ ಹಣವೂ ವಾಪಾಸಾಗಿದೆ. ಕಾಮಗಾರಿಗೆ ಕೂಲಿ ಕಾರ್ಮಿಕರ ಕೊರತೆಯೂ ಎದುರಾಗಿದೆ. ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಪಂದೇಟು ಕಾಲೋನಿ ಹಾಗೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಮಳೆಗಾಲಕ್ಕೂ ಮುನ್ನ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಜನ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದಾರೆ.
Advertisement
ಪ್ರವಾಹದ ಹೆಸರಲ್ಲಿ ಗುತ್ತಿಗೆದಾರರು ಅವೈಜ್ಞಾನಿಕ, ಕಳಪೆ ಕಾಮಗಾರಿ ಮಾಡುತ್ತಿದ್ದು, ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಸೇತುವೆ ನಿರ್ಮಿಸಿ ಕಬ್ಬಿಣದ ಸರಳುಗಳನ್ನು ಹಾಗೆಯೇ ಬಿಟ್ಟು ತಡೆಗೋಡೆಯನ್ನೂ ಕಟ್ಟದೆ ಬೇಜಾವಾಬ್ದಾರಿ ಪ್ರದರ್ಶಿಸಿದ್ದಾರೆ.