ಕೋಲಾರ : ಸಿಡಿ ಹಿಂದೆ ಮಹಾನ್ ನಾಯಕನ ಕೈವಾಡವಿದೆ ಎಂದು ನಾನು ಹೇಳಿಲ್ಲ. ರಮೇಶ್ ಜಾರಕಿಹೊಳಿ ಮಹಾನ್ ನಾಯಕನ ಕೈವಾಡವಿದೆ ಎಂದು ಹೇಳಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕೋಲಾರದಲ್ಲಿ ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಎಲ್ಲಿಯೂ ಸಹ ಸಿಡಿ ಹಿಂದೆ ಮಹಾನ್ ನಾಯಕನ ಕೈವಾಡವಿದೆ ಎಂದು ಹೇಳಿಲ್ಲ. ಹೇಳಿರುವುದು ರಮೇಶ್ ಜಾರಕಿಹೊಳಿ. ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ಎಸ್‍ಐಟಿ ತಾತ್ಕಾಲಿಕವಾಗಿ ತನಿಖೆ ಮಾಡಿದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಯಾರಿಗೆ ಅನ್ಯಾಯ ಅಗಿದೆ ಎಂಬುದನ್ನು ಎಸ್‍ಐಟಿಯವರೇ ಹೇಳಬೇಕು ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜ್ಯದಲ್ಲಿನ ಸಿಡಿ ಬೆಳವಣಿಗೆಯನ್ನು ತಿರುಗಿಸಲು ರಾಜ್ಯದವರೇ ಸೃಷ್ಟಿಮಾಡಿದಂತೆ ಕಾಣಿಸುತ್ತಿದೆ. ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ನಾನೆಂದು ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ಹೋಗಿಲ್ಲ. ನನ್ನ ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ಪಕ್ಷ ಕಟ್ಟಿಕೊಂಡು ಬಂದಿದ್ದೇನೆ. ಅವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕಾಂಗ್ರೆಸ್ ನವರು ಮೈತ್ರಿಗಾಗಿ ನಮ್ಮ ಬಳಿ ಬಂದಿದ್ದು, ನಂತರ ನಮಗೆ ಕೈಕೊಟ್ಟಿದ್ದು ಸಹ ಕಾಂಗ್ರೆಸ್‍ನವರು, ಅದೆಲ್ಲಾ ಮುಗಿದು ಹೋದ ಅಧ್ಯಾಯ ಎಂದು ಕಾಂಗ್ರೆಸ್ ಪರ ಗುಡುಗಿದರು.