-ಅಧಿಕಾರಿಗಳ ವಿರುದ್ಧ ಆಕ್ರೋಶ
ರಾಯಚೂರು: ಜಿಲ್ಲೆಯ ಮಸ್ಕಿ ಹಳ್ಳದಲ್ಲಿ ಯುವಕ ಕೊಚ್ಚಿ ಹೋದ ಪ್ರಕರಣ ಹಿನ್ನೆಲೆ ಯುವಕನ ಕುಟುಂಬಸ್ಥರು ಹಾಗೂ ಸ್ಥಳೀಯರು ಮಸ್ಕಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಯುವಕನ ರಕ್ಷಣಾ ಕಾರ್ಯ ವಿಫಲವಾದ ಹಿನ್ನೆಲೆ ಆಕ್ರೋಶಗೊಂಡಿರುವ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಹಳ್ಳದಲ್ಲಿ ನಾಪತ್ತೆಯಾದ ಚನ್ನಬಸಪ್ಪನ ಕುಟುಂಬ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಅಂತ ಕಿಡಿಕಾರಿದ್ದಾರೆ. ಮಸ್ಕಿ ಹಳ್ಳದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೊಚ್ಚಿಹೋದ ಬಳಿಕವೂ ಅಧಿಕಾರಿಗಳು ಪತ್ತೆ ಕಾರ್ಯ ನಡೆಸಿಲ್ಲ ಅಂತ ಆರೋಪ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಮದುವೆಯಾಗಿದ್ದ 34 ವರ್ಷದ ಚನ್ನಬಸಪ್ಪನಿಗೆ ಎರಡು ವರ್ಷದ ಮಗುವಿದೆ. ಮನೆಗೆ ಆಧಾರವಾಗಿದ್ದ ಪತಿಯನ್ನ ಹುಡುಕಿಕೊಡಿ ಅಂತ ಚನ್ನಬಸಪ್ಪನ ಪತ್ನಿ ನೇತ್ರಾವತಿ ಅಂಗಲಾಚಿದ್ದಾರೆ.
ಮಸ್ಕಿ ನಾಲೆಯಿಂದ ಹೆಚ್ಚಿನ ಪ್ರಮಾಣದ ನೀರು ಏಕಾಏಕಿ ಹಳ್ಳಕ್ಕೆ ಹರಿಸಿದ್ದರಿಂದ ಹೊರಬರಲಾಗದೆ ಚನ್ನಬಸಪ್ಪ ಹಾಗೂ ಜಲೀಲ ಅನ್ನೋ ಇನ್ನೋರ್ವ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದ್ರೆ ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮ ಕೈಗೊಳ್ಳದೆ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಇಳಿದಿದ್ದರಿಂದ ಹಳ್ಳದಲ್ಲಿ ಹಗ್ಗ ತುಂಡಾಗಿ ಚನ್ನಬಸಪ್ಪ ಕೊಚ್ವಿಕೊಂಡು ಹೋಗಿದ್ದಾನೆ. ಇದುವರೆಗೂ ಚನ್ನಬಸಪ್ಪನ ಸುಳಿವು ಸಿಕ್ಕಿಲ್ಲ. ಜಲೀಲನನ್ನ ಕ್ರೇನ್ ಮುಖಾಂತರ ರಕ್ಷಣೆ ಮಾಡಲಾಗಿದೆ. ಆದ್ರೆ ಚನ್ನಬಸಪ್ಪನ ರಕ್ಷಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪಿಸಲಾಗಿದೆ.