ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಧಾರಾಕಾರ ಮಳೆಗೆ ಮಲೆನಾಡು ಅಲ್ಲೋಲ-ಕಲ್ಲೋಲವಾಗಿದೆ. ಸೋಮವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.
ಜಿಲ್ಲೆಯ ಏಳು ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಇಡೀ ಕಾಫಿನಾಡು ಮಳೆನೀರಿನಿಂದ ತೊಯ್ದಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಮಳೆ ಅಬ್ಬರಕ್ಕೆ ಜನಜೀವನ ಹೈರಾಣಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಅಲ್ಲದೆ ಕೊಟ್ಟಿಗೆಹಾರದಲ್ಲಿ ಅಂಗಡಿ ಮಳಿಗೆಗಳ ಮೇಲೆ ಹಾಕಿದ್ದ ಶೀಟ್‍ಗಳು ಗಾಳಿ ಹಾರಿ ಹೋಗಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮಲೆನಾಡಿಗರು ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುವಂತಹಾ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಗೌಡಹಳ್ಳಿ, ಭೈರಾಪುರ, ಗುತ್ತಿ, ದೇವರಮನೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಊಹಿಸಲು ಆಗದಂತಹ ಮಳೆ ಸುರಿಯುತ್ತಿದೆ. ನಾಟಿ ಮಾಡಿದ ಗದ್ದೆಯ ಮೇಲೆ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ಅನ್ನದಾತ ರೈತರು ಕಂಗಲಾಗಿದ್ದಾರೆ. ಗೌಡಹಳ್ಳಿಯಲ್ಲಿ ರಸ್ತೆಯ ಮೇಲೆ ನೀರು ಹರಿದು ಹೋಗುತ್ತಿರುವ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ನಿನ್ನೆಯಿಂದ ಸತತವಾಗಿ ಬಿರುಗಾಳಿ ಸಹಿತ ಮಳೆ ಆರ್ಭಟಿಸುತ್ತಿರುವುದರಿಂದ ಜನರು ಜೀವವನ್ನ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.
ಎನ್.ಆರ್.ಪುರದಲ್ಲೂ ಭಾರೀ ಮಳೆಯಿಂದ ಮುಡುಬ ರಸ್ತೆ ಮೇಲೆ ನೀರು ಹರಿದ ಪರಿಣಾಮ ಮುಡುಬ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಾಹನ ಸವಾರರು ಕತ್ತಲಲ್ಲಿ ಮರವನ್ನ ಕಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದಲ್ಲಿ ಲಕ್ಷ್ಮಮ್ಮ ಎಂಬುವರ ಮನೆಯ ಹೆಂಚುಗಳು ಹಾರಿ ಹೋಗಿವೆ. ಒಂದೇ ದಿನಕ್ಕೆ ಮಳೆರಾಯ ಮಲೆನಾಡಿಗರಿಗೆ ಈ ವರ್ಷ ಇನ್ನೇನು ಅವಾಂತರ ಸೃಷ್ಠಿಸ್ತಾನೋ ಎಂಬ ಆತಂಕದಲ್ಲಿ ಬದುಕುವಂತಾಗಿದೆ.