ಮಳೆಹುಡುಗನ ಬರ್ತ್‍ಡೇಗೆ ‘ಸಖತ್’ ಉಡುಗೊರೆ!

Public TV
2 Min Read
Ganesh

ಮುಂಗಾರು ಮಳೆಯೆಂಬ ಸೂಪರ್ ಹಿಟ್ ಸಿನಿಮಾ ಮೂಲಕ ಸ್ಟಾರ್ ಆಗಿ ಅವತರಿಸಿದ್ದವರು ಗಣೇಶ್. ಆ ಮಹಾ ಗೆಲುವಿನಿಂದ ಗೋಲ್ಡನ್ ಸ್ಟಾರ್ ಎಂದೇ ಖ್ಯಾತರಾದ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊರೊನಾ ದೆಸೆಯಿಂದ ಮಾಮೂಲಿನಂತೆ ಅದನ್ನು ಸೆಲೆಬ್ರೇಟ್ ಮಾಡಲಾಗದಿದ್ದರೂ ಅಭಿಮಾನಿಗಳು ಇದ್ದಲ್ಲಿಂದಲೇ ಶುಭ ಕೋರುತ್ತಿದ್ದಾರೆ. ಇದೇ ಹೊತ್ತಿನಲ್ಲಿ ನಿರ್ದೇಶಕ ಸಿಂಪಲ್ ಸುನಿ ‘ಸಖತ್’ ಆಗಿರೋ ಉಡುಗೊರೆಯನ್ನೇ ನೀಡಿದ್ದಾರೆ.

ಸಿಂಪಲ್ ಸುನಿ ಕೊಟ್ಟಿರೋ ಈ ಉಡುಗೊರೆಯಿಂದ ಗಣೇಶ್ ಮಾತ್ರವಲ್ಲದೇ ಅವರ ಸಮಸ್ತ ಅಭಿಮಾನಿ ಬಳಗವೂ ಥ್ರಿಲ್ ಆಗಿದೆ. ಅಂದಹಾಗೆ ಸಿಂಪಲ್ ಸುನಿ ಗಣೇಶ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಅನ್ನು ಲಾಂಚ್ ಮಾಡಿದ್ದಾರೆ. ಲಾಕ್‍ಡೌನ್ ಚಾಲ್ತಿಯಲ್ಲಿದ್ದಾಗಲೇ ಇದಕ್ಕೆ ತಯಾರಿ ನಡೆಸಿದ್ದ ಸುನಿ ಎಲ್ಲರೂ ಖುಷಿಗೊಳ್ಳುವಂತೆ ರ‍್ಯಾಪ್ ಮೋಷನ್ ಪೋಸ್ಟರ್ ಅನ್ನು ರೂಪಿಸಿದ್ದಾರೆ. ಆ ಮೂಲಕವೇ ಈ ಸಿನಿಮಾದಲ್ಲಿ ಗಣಿ ಅವತಾರ ಡಿಫರೆಂಟಾಗಿರಲಿದೆ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.

ಸಿಂಪಲ್ ಸುನಿ ಬಹು ಹಿಂದಿನಿಂದಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಿನಿಮಾ ಮಾಡಬೇಕನ್ನೋ ಕನಸು ಕಂಡಿದ್ದವರು. ಈ ಹಿಂದೆ ‘ಚಮಕ್’ ಚಿತ್ರದ ಮೂಲಕ ಅದು ಸಾಕಾರಗೊಂಡಿತ್ತು. ಅದು ಯಶಸ್ಸನ್ನೂ ಕಂಡಿತ್ತು. ಆ ಘಳಿಗೆಯಲ್ಲಿಯೇ ಈ ಜೋಡಿ ಮತ್ತೆ ಒಂದಾಗಿ ಮತ್ತೊಂದು ಮ್ಯಾಜಿಕ್ಕು ಮಾಡೋ ಸೂಚನೆಯೂ ಸಿಕ್ಕಿತ್ತು. ಅದು ಸಿಂಪಲ್ ಸುನಿ ಕಡೆಯಿಂದಲೇ ಜಾಹೀರಾಗಿತ್ತು. ಅದು ಸಖತ್ ಅನ್ನೋ ಸಿನಿಮಾ ಮೂಲಕ ಸಾಕಾರಗೊಂಡಿದೆ.

ganesh 1

ಈ ಚಿತ್ರವನ್ನು ಯಶಸ್ವಿ ಯುವ ನಿರ್ದೇಶಕ ಸುಪ್ರೀತ್, ನಿಶಾ ವೆಂಕಟ್ ಕೋನಂಕಿ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರೋ ಸಖತ್ ಚಿತ್ರಕ್ಕೆ ಟೈಟಲ್ಲಿಗೆ ತಕ್ಕುದಾದ ಕಥೆಯನ್ನೇ ಸುನಿ ರೆಡಿ ಮಾಡಿಕೊಂಡಿದ್ದಾರಂತೆ. ತಾರಾಗಣವೂ ಸೇರಿದಂತೆ ಪ್ರತಿಯೊಂದನ್ನೂ ಸುನಿ ಪಕ್ಕಾ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಹೊತ್ತಿಗೆಲ್ಲ ಸಖತ್ ಸೊಗಸಾಗಿಯೇ ಸದ್ದು ಮಾಡಿರುತ್ತಿತ್ತು. ಕೊರೊನಾ ಅದಕ್ಕೆ ಬ್ರೇಕು ಹಾಕಿದರೂ ಈ ರ‍್ಯಾಪ್ ಮೋಷನ್ ಪೋಸ್ಟರ್ ಸಖತ್ತಾಗಿಯೇ ಸೌಂಡು ಮಾಡುತ್ತಿದೆ.

Director Suni

ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಈ ರ‍್ಯಾಪ್ ಮೋಷನ್ ಪೋಸ್ಟರ್ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿಸಿದೆ. ಈ ಬಾರಿ ಕೊರೊನಾ ಕಾರಣದಿಂದ ಎಲ್ಲರೂ ಇದ್ದಲ್ಲಿಂದಲೇ ಹಾರೈಸಿ ಅಂತ ಗಣೇಶ್ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಇದೀಗ ಸುನಿ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ಅನ್ನು ಅಭಿಮಾನಿಗಳೆಲ್ಲ ಎಂಜಾಯ್ ಮಾಡ್ತಿದ್ದಾರೆ. ಈ ಮೂಲಕವೇ ತಮ್ಮಿಷ್ಟದ ನಟನನ್ನು ಭಿನ್ನ ಗೆಟಪ್ಪಿನಲ್ಲಿ ಕಣ್ತುಂಬಿಕೊಳ್ಳುವ ಬಯಕೆ ಅಭಿಮಾನಿಗಳೆಲ್ಲರಲ್ಲಿ ತೀವ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *