ಚಿಕ್ಕಮಗಳೂರು: ಜಿಲ್ಲೆಯ ಮಳೆಯ ತವರೂರಾದ ಕೊಟ್ಟಿಗೆಹಾರ ಗ್ರಾಮದಲ್ಲಿ ಕಾಮನಬಿಲ್ಲು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಜನ ಜೂನ್ 10-15ರಿಂದ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೂರ್ಯನನ್ನ ನೋಡೋದೇ ತೀರಾ ವಿರಳ. ಕಾರಣ ಇಲ್ಲಿ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಮಳೆ ಆರಂಭವಾದರೆ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಒಂದೇ ಸಮನೆ ಸುರಿಯುತ್ತಿರುತ್ತದೆ. ಜನ ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಾರೆ. ಸೂರ್ಯನನ್ನ ನೋಡೋದು ತೀರಾ ವಿರಳ.
ಜುಲೈ ಎರಡನೇ ವಾರ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವಂತೆ ಭಾಸವಾಗ್ತಿರೋ ಮನಮೋಹಕ ಕಾಮನಬಿಲ್ಲು ಸ್ಥಲೀಯರಲ್ಲಿ ಆಶ್ಚರ್ಯದ ಜೊತೆ ಕುತೂಹಲ ಮೂಡಿಸಿದೆ. ಸಂಜೆ 6.30ರ ವೇಳೆಗೆ ಗೋಚರವಾದ ಈ ಕಾಮನಬಿಲ್ಲಿಗೆ ಸ್ಥಳೀಯರು ಫಿದಾ ಆಗೋದ್ರ ಜೊತೆ ಕಾಮನಬಿಲ್ಲನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಅಷ್ಟೆ ಅಲ್ಲದೆ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರೋ ಕಾಮನಬಿಲ್ಲು ಹೇಮಾವತಿ ನದಿಯ ಒಡಲಿನ ಮೇಲೆ ಬೆಳಕು ಚೆಲ್ಲಿದಂತೆ ಕಾಣುತ್ತಿದ್ದನ್ನು ಕಂಡು ಸ್ಥಳೀಯರು ಮತ್ತಷ್ಟು ಪುಳಕಿತರಾಗಿದ್ದಾರೆ.
ಕಳೆದೊಂದು ವಾರದ ಹಿಂದೆ ಇದೇ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನ ಆತಂಕಕ್ಕೀಡಾಗಿದ್ದರು. ಮಳೆ ಆರಂಭವಾಯಿತು. ಕಳೆದ ವರ್ಷ ಬದುಕನ್ನೇ ನುಂಗಿ ಹಾಕಿದ್ದ ವರುಣದೇವ ಈ ವರ್ಷ ಇನ್ನೇನು ಅನಾಹುತ ಸೃಷ್ಠಿಸಿ ಅವಾಂತರ ಮಾಡುತ್ತಾನೋ ಎಂದು ಸ್ಥಳೀಯರು ಕಂಗಾಲಾಗಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಕ್ಷೀಣಿಸಿದೆ.
ಮಳೆ ಇಲ್ಲದಿದ್ದರೂ ಸದಾ ತಣ್ಣನೆಯ ಗಾಳಿ ಜೊತೆ ಯಾವಾಗಲು ಮೋಡ ಕವಿದ ವಾತಾವರಣವಿರೋ ಕೊಟ್ಟಿಗೆಹಾರದಲ್ಲಿ ಜುಲೈ ಎರಡನೇ ವಾರದಲ್ಲಿ ಬಿಸಿಲಿನ ಮಧ್ಯೆ ಕಾಮನಬಿಲ್ಲನ್ನು ಕಂಡು ಜನ ಪುಳಕಿತರಾಗಿದ್ದಾರೆ. ಜೊತೆಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಂತೆ ಭಾಸವಾಗ್ತಿರೋ ಕಾಮನಬಿಲ್ಲನ್ನ ಕಂಡ ಸ್ಥಳೀಯರು ಸಂತಸ ಪಟ್ಟಿದ್ದಾರೆ.