– ತುಂಬಿದ ನದಿ, ಹಳ್ಳಕೊಳ್ಳಗಳು
ದಾವಣಗೆರೆ/ರಾಯಚೂರು: ಅನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನರ ಜೀವನ ಕೂಡ ಅಸ್ತವ್ಯಸ್ತವಾಗುತ್ತಿದೆ. ಇದೀಗ ಜಿಲ್ಲೆಯಲ್ಲಿ ಏಕಾಏಕಿ ಸುರಿದ ಮಳೆಗೆ ಮನೆಗಳು ಜಲಾವೃತವಾಗಿವೆ.
ಜಿಲ್ಲೆಯ ಬಾಡಾ ಗ್ರಾಮದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ರಾತ್ರಿಯಿಡೀ ನೀರನ್ನು ಜನರು ಹೊರಹಾಕಿದ್ದಾರೆ. ಅಲ್ಲದೇ ಮನೆಯಲ್ಲಿದ್ದ ದವಸ, ಧಾನ್ಯಗಳು ಸಾಮಗ್ರಿಗಳು ನೀರುಪಾಲಾಗಿವೆ. ದಾವಣಗೆರೆ, ಚನ್ನಗಿರಿ, ಮಾಯಕೊಂಡ ಸೇರಿದಂತೆ ಹಲವು ಕಡೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ.
Advertisement
Advertisement
ಇತ್ತ ರಾತ್ರಿ ಸುರಿದ ಮಳೆಗೆ ಚೆಕ್ ಡ್ಯಾಂ ಒಡೆದು ಹೋಗಿದೆ. ಜಗಳೂರಿನ ಸಾಲಹಳ್ಳಿ ಮತ್ತು ಹಾಲಹಳ್ಳಿ ಮಧ್ಯೆಯಿರುವ ಚೆಕ್ ಡ್ಯಾಮ್ ಒಡೆದು ನೀರು ಪೋಲಾಗುತ್ತಿದೆ. ಕಳಪೆ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದಕ್ಕೆ ಒಡೆದು ಹೋಗಿದೆ ಎಂದು ಜನರು ಆರೋಪ ಮಾಡುತ್ತಿದ್ದಾರೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಗಳೂರು ಸುತ್ತಮುತ್ತ ಕೆರೆ ಕಟ್ಟೆಗಳು ತುಂಬಿವೆ.
Advertisement
Advertisement
ಇನ್ನೂ ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಜನರು ಪರದಾಟ ಮಾಡುತ್ತಿದ್ದಾರೆ. ಧಾರಾಕಾರವಾಗಿ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೇ ನಿರಂತರ ಮಳೆಯಿಂದ ಬೆಳೆ ಹಾಳಾಗುವ ಆತಂಕದಲ್ಲಿ ಅನ್ನದಾತರು ಕಂಗಾಲಾಗಿದ್ದಾರೆ.
ಭಾರೀ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿವೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿರುವ ಮಸ್ಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹಳ್ಳಕ್ಕೆ ಬಿಡಲು ಸಿದ್ಧತೆ ಮಾಡಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ನೀರು ಬಿಡುವುದರಿಂದ ಹಳ್ಳದ ಬಳಿ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.