ಚಾಮರಾಜನಗರ: ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮುಂದೆ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸಿರುವ ಬಗ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಸುದ್ದಿಗೋಷ್ಠಿ ನಡೆಸಿ ಹಲವು ಸ್ಪಷ್ಪನೆ ಕೊಟ್ಟಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಜಮೀನನ್ನು ಪಕ್ಕದ ಜಮೀನು ಮಾಲೀಕ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸುಶೀಲ ಅವರು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಎದುರು ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಗೂ ಮುನ್ನ ಮೊದಲೇ ನಮ್ಮ ಪೊಲೀಸರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯಾರ ಮಾತಿಗೂ ಒಪ್ಪದೆ ಮಳೆಯಲ್ಲೇ ಧರಣಿ ನಡೆಸಿದ್ದಾರೆ. ಆಕೆ ಹೇಳುವ ಜಮೀನು ಒತ್ತುವರಿಯಾಗಿಲ್ಲ, ಇದು ಸಂಪೂರ್ಣ ಸಿವಿಲ್ ವ್ಯಾಜ್ಯವಾಗಿದ್ದು ಜಿಲ್ಲಾಧಿಕಾರಿಗಳು ಈಗಾಗಲೇ ಈ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಆದರೂ ಆಕೆ ಸರ್ವೆ ನಂಬರ್ 1/134 ರಲ್ಲಿ ಇರುವ ಜಮೀನು ತನ್ನದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.
ಕಾನೂನು ಪ್ರಕಾರ ಈ ಜಮೀನು ಬಿಡಿಸಿಕೊಡಲು ಸಾಧ್ಯವಿಲ್ಲ. ಆದರೂ ಆಕೆ ಈ ಜಮೀನಿನಲ್ಲಿ ಉಳುಮೆ ಮಾಡಲು ರಕ್ಷಣೆ ಬೇಕು ಎಂದು ಠಾಣೆಗೆ ಬಂದು ಮಳೆಯಲ್ಲೇ ನೆನೆಯುತ್ತಾ ಧರಣಿ ನಡೆಸಿದ್ದಾರೆ. ಧರಣಿ ಪ್ರಕರಣದ ಬಗ್ಗೆ ವರದಿ ತರಿಸಿಕೊಂಡು ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ನಿರ್ಧಾಕ್ಷಿಣ್ಯ ಕ್ರಮ ವಹಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ತಿಳಿಸಿದ್ದಾರೆ.