– ಕಣ್ಣುಚ್ಚಿ ಕುಳಿತ ಜಿಲ್ಲಾಡಳಿತ
ಯಾದಗಿರಿ: ಕಳೆದ ಹತ್ತು ದಿನದ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದ್ದು, ಬಡ ಜನರ ಮನೆಯ ಜೊತೆ ಜೀವನವನ್ನೂ ಹಾಳು ಮಾಡಿದೆ.
ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಕುಟುಂಬವೊಂದು ಇದೀಗ ಬೀದಿಯಲ್ಲಿ ಬದುಕು ಸಾಗಿಸುತ್ತಿದೆ. ನಾಯ್ಕಲ್ ಗ್ರಾಮದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಗಾಳೆಪ್ಪ ಅವರ ಮನೆ ಸಂಪೂರ್ಣವಾಗಿ ಕುಸಿದಿತ್ತು. ತಡರಾತ್ರಿ ಏಕಾಏಕಿ ಮನೆ ಕುಸಿದ ಪರಿಣಾಮ, ಮನೆಯಲ್ಲಿ ಮಲಗಿದ್ದ ಮಹಿಳೆಯರು ಮತ್ತು ಮಗುವಿಗೆ ಗಂಭೀರ ಗಾಯಗಳಾಗಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳಾಗಿರಲಿಲ್ಲ. ಸದ್ಯ ಕುಟುಂಬಸ್ಥರು ಚೇತರಿಸಿಕೊಂಡಿದ್ದು, ವಾಸಿಸಲು ಮನೆಯಲ್ಲದಂತಾಗಿದೆ.
ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ. ಕುಸಿದ ಮನೆಯನ್ನು ನಿರ್ಮಿಸಿಕೊಳ್ಳಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ. ಬಿದ್ದ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಜೀವನ ನಡೆಸುತ್ತಿರುವ ಕುಟುಂಬಸ್ಥರು, ತಾರ್ಪಲ್ ಮತ್ತು ಶೀಟ್ ಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ದೂಡುತ್ತಿದ್ದಾರೆ. ಮತ್ತೆ ಮಳೆ, ಗಾಳಿ ಆರಂಭವಾದರೆ ಎಂಬ ಆತಂಕ ಇದೀಗ ಕುಟುಂಬಸ್ಥರಲ್ಲಿ ಮೂಡಿದೆ.
ತೆರದ ಜಾಗದಲ್ಲೇ ಅಡುಗೆ, ಊಟ ಮತ್ತು ಮಕ್ಕಳು ಓದುತ್ತಿದ್ದಾರೆ. ಕೊರೊನಾ ಭೀತಿಯಿಂದ ಗ್ರಾಮಸ್ಥರು ಸಹ ಈ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗುತ್ತಿಲ್ಲ. ಕೆಲವರು ಆಹಾರ ಧಾನ್ಯಗಳನ್ನು ಕೊಟ್ಟಿದ್ದಾರೆ. ಹೀಗೆ ಸಂಕಷ್ಟದಲ್ಲೇ ಕುಟುಂಬ ಜೀವನ ಸಾಗಿಸುತ್ತಿದೆ. ಇಲ್ಲಿಯವರಿಗೆ ಯಾವುದೇ ಅಧಿಕಾರಿ, ಸ್ಥಳೀಯ ಜನ ಪ್ರತಿನಿಧಿ ಇವರ ಕಷ್ಟ ಆಲಿಸಿಲ್ಲ. ಹೀಗಾಗಿ ಕುಟುಂಬಸ್ಥರು ಆಕ್ರೋಶಕ್ಕೊಳಗಾಗಿದ್ದಾರೆ.