– ಮುಂಬೈನಿಂದ ತೀರ್ಥಹಳ್ಳಿಗೆ ಬಂದಿದ್ದ ವ್ಯಕ್ತಿಗೆ ಸೋಂಕು
ಶಿವಮೊಗ್ಗ: ಮಲೆನಾಡಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ಹಾವಳಿ ಕಾಣಿಸಿಕೊಂಡ ಆರಂಭದ ದಿನದಿಂದಲೂ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಹೀಗಾಗಿ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಆದರೆ ಜಿಲ್ಲೆಗೆ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲೆಯ ಜನರಿಗೆ ತಲೆ ನೋವಾಗಿ ಪರಿಣಮಿಸಿದೆ.
Advertisement
Advertisement
ಕಳೆದ ಐದು ದಿನದ ಹಿಂದೆ ಗುಜರಾತ್‍ನ ಅಹಮದಾಬಾದ್‍ನಿಂದ ಜಿಲ್ಲೆಗೆ ಆಗಮಿಸಿದ್ದ 8 ಮಂದಿ ತಬ್ಲಿಘಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಇಂದು ಮುಂಬೈನಿಂದ ತೀರ್ಥಹಳ್ಳಿ ತಾಲೂಕಿನ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಹಾಸ್ಟೆಲ್‍ವೊಂದರಲ್ಲಿ ಕ್ವಾರಂಟೈನ್‍ಗೆ ಇಡಲಾಗಿತ್ತು. ಆದರೆ ಗುರುವಾರ ರಾತ್ರಿ ವ್ಯಕ್ತಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನಿಸಲಾಯಿತು. ಈ ವೇಳೆ ಅವರಿಗೆ ಕೊರೊನಾ ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.
Advertisement
Advertisement
ಸೋಂಕಿತ ವ್ಯಕ್ತಿ ಅವರ ಕುಟುಂಬಸ್ಥರ ಜೊತೆ ಹಾಗೂ ಹಲವು ಮಂದಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಹೀಗಾಗಿ ಸಂಪರ್ಕದಲ್ಲಿದ್ದ ಎಲ್ಲರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಅಲ್ಲದೇ ಮುಂಬೈನಿಂದ ಬಂದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲು ಪೊಲೀಸರು ಹಾಗೂ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಒಟ್ಟಾರೆ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲವಾಗಿದ್ದ ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಿಂದ ಸೋಂಕು ಪತ್ತೆಯಾಗಿದೆ.