ಶಿವಮೊಗ್ಗ: ಮಲೆನಾಡು ಗ್ರೀನ್ ಝೋನ್ ನಲ್ಲಿ ಇರುವಾಗಲೇ, ಇಂದು ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 14 ಕ್ಕೇರಿದೆ. ಇದು ಮಲೆನಾಡಿಗರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಅದರಲ್ಲೂ ಸಂಪೂರ್ಣ ಮಲೆನಾಡು ಪಟ್ಟಣಗಳಾಗಿರುವ ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿಯೇ ಈ ಪ್ರಕರಣಗಳು ಕಂಡು ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತರೆಲ್ಲರೂ ಮುಂಬೈನಿಂದ ಬಂದವರಾಗಿರುವುದು ಸ್ಥಳೀಯರಲ್ಲಿ ಯಾವುದೇ ಲಕ್ಷಣಗಳು ಪತ್ತೆಯಾಗದೇ ಇರುವುದು ಸಮಾಧಾನಕರ ಸಂಗತಿಯಾಗಿದೆ. ಶನಿವಾರ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಗರ್ಭಿಣಿ ಮತ್ತು ನಾಲ್ಕು ವರ್ಷದ ಹೆಣ್ಣು ಮಗು ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ತೀರ್ಥಹಳ್ಳಿ ಮತ್ತು ಹೊಸನಗರದ ತಲಾ ಒಬ್ಬರಿಗೆ ವರದಿಯಲ್ಲಿ ಪಾಸಿಟಿವ್ ಬಂದಿರುವುದು ಮತ್ತೊಮ್ಮೆ ಮಲೆನಾಡಿಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಇಬ್ಬರು ಕೂಡ ಕಳೆದೆರಡು ದಿನಗಳ ಹಿಂದೆಯಷ್ಟೇ ಖಾಸಗಿ ವಾಹನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದು, ತಕ್ಷಣವೇ ಇವರನ್ನು ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಶನಿವಾರ ರಾತ್ರಿ ಈ ಇಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ಇಂದು ಆರೋಗ್ಯ ಇಲಾಖೆಯ ವರದಿಯಲ್ಲಿ ಬಹಿರಂಗವಾಗಿದೆ.
ಮಂಡ್ಯ, ಕಲಬುರಗಿಯಲ್ಲಿ ಕೊರೊನಾ ಆರ್ಭಟ- ರಾಜ್ಯದಲ್ಲಿ ಇಂದು 54 ಮಂದಿಗೆ ಸೋಂಕು .1,146ಕ್ಕೆ ಏರಿದ ಸೋಂಕಿತರ ಸಂಖ್ಯೆ https://t.co/2qFjvd3VFx#Mandya #Hassana #Corona #Covid19 #KannadaNews #coronaupdatesindia
— PublicTV (@publictvnews) May 17, 2020
ಸೋಂಕಿತರಿಬ್ಬರನ್ನು ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಜಿಲ್ಲೆಯ ಜನರು ಗಾಬರಿಪಡುವ ಅಗತ್ಯವಿಲ್ಲ. ಆದರೆ ಜನರು ಸುರಕ್ಷತೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಜನರು ಸುಳ್ಳು ಸುದ್ದಿ ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಶಿವಕುಮಾರ್ ಅವರು ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಮತ್ತು ಸರ್ಕಾರಿ ನೌಕರರಿಗೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡುವಾಗ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.