– ಮಲೆನಾಡು ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ
– ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆ
– ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದ ಜನರಿಗಿಲ್ಲ ಪ್ರವೇಶ
ಶಿವಮೊಗ್ಗ: ಕಳೆದ ಒಂದೂವರೆ ತಿಂಗಳಿನಿಂದ ಗ್ರೀನ್ ಜೋನ್ ನಲ್ಲಿದ್ದ ಶಿವಮೊಗ್ಗಕ್ಕೆ ಇದೀಗ ಸಿಡಿಲಾಘಾತವಾಗಿದ್ದು, ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 14ರಿಂದ ಒಂದೇ ಬಾರಿಗೆ ಏರಿಕೆ ಕಂಡಿದ್ದು, 24ಕ್ಕೆ ಏರಿದೆ. ಹೀಗಾಗಿ ಹೊರ ರಾಜ್ಯಗಳಿಂದ ಶಿವಮೊಗ್ಗಕ್ಕೆ ಬರುವವರಿಗೆ ನೋ ಎಂಟ್ರಿ ಎನ್ನಲಾಗಿದ್ದು, ಇನ್ನು 167 ಮಂದಿಯ ಫಲಿತಾಂಶ ಬರುವುದು ಬಾಕಿ ಇದೆ.
ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಇತರೆ ಜಿಲ್ಲೆಗಳ ಕೊರೊನಾ ಸೋಂಕಿತರ ಸಂಖ್ಯೆ ಕಂಡು ಆತಂಕದಲ್ಲಿದ್ದ ಮಲೆನಾಡಿನ ಜನತೆಗೆ ಇದೀಗ ಸಿಡಿಲಾಘಾತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಒಂದೇ ಬಾರಿಗೆ ಸೋಂಕು ಪೀಡಿತರ ಸಂಖ್ಯೆ 24ಕ್ಕೆ ಏರಿಕೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ಸೋಮವಾರ ಸಂಜೆಯವರೆಗೂ ಕೇವಲ 14 ಸೋಂಕಿತರ ಸಂಖ್ಯೆ ಇದ್ದು, ರಾತ್ರಿ ಬಳಿಕ 10 ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ಈ ಮೊದಲು ತಬ್ಲಿಘಿಗಳು ನಂತರ ಮುಂಬೈನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಹೊಸದಾಗಿ ಕೇರಳ ಹಾಗೂ ಆಂಧ್ರಪ್ರದೇಶದಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
Advertisement
Advertisement
ಸ್ಥಳೀಯರಲ್ಲೂ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಳೆಕೊಪ್ಪ, ತೀರ್ಥಹಳ್ಳಿಯ ಹಳ್ಳಿಬೈಲು ಹಾಗೂ ಶಿಕಾರಿಪುರದ ತರಲಘಟ್ಟ ಗ್ರಾಮಗಳನ್ನು ಕಂಟೈನ್ ಮೆಂಟ್ ಜೋನ್‍ಗಳಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ತೀರ್ಥಹಳ್ಳಿಗೆ ಮುಂಬೈ ಮೂಲದಿಂದ ಬಂದಿದ್ದ ಐವರಿಗೆ ಸೋಂಕು ತಗುಲಿರುವುದು ಧೃಢವಾಗಿದ್ದು, ಕೇರಳದಿಂದ ಶಿವಮೊಗ್ಗಕ್ಕೆ ಬಂದಿದ್ದ ಸೂಳೆಬೈಲು ಬಡಾವಣೆಯ ಇಬ್ಬರು ನಿವಾಸಿಗಳು ಹಾಗೂ ಆಂಧ್ರ ಮೂಲದ ಓರ್ವ ವ್ಯಕ್ತಿಗೆ ಸೋಂಕು ಧೃಢವಾಗಿದೆ.
Advertisement
ಇನ್ನೂ ಆಘಾತಕಾರಿ ವಿಚಾರವೆಂದರೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಇಬ್ಬರಿಗೆ ಸೋಂಕು ತಗುಲಿದೆ. ಕುಂಸಿಯ ಬಾಳೆಕೊಪ್ಪ ಗ್ರಾಮದ 63 ವರ್ಷದ ಹಾಲು ವ್ಯಾಪಾರಿ ಮತ್ತು ಶಿಕಾರಿಪುರದ ತರ್ಲಘಟ್ಟ ಗ್ರಾಮದ ಯುವತಿಯೊಬ್ಬಳಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ತಿಳಿಯದಾಗಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ಸಹ ಕೈಗೊಂಡಿದ್ದಾರೆ. ಇವರಿಬ್ಬರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
Advertisement
ಒಟ್ಟಾರೆ ಶಿವಮೊಗ್ಗದಲ್ಲಿ ಪ್ರಸ್ತುತ 916 ಜನ ಸಾಂಸ್ಥಿಕ ಕ್ವಾರೆಂಟೈನ್ ಮತ್ತು 64 ಮಂದಿ ಹೋಮ್ ಕ್ವಾರೆಂಟೈನ್‍ನಲ್ಲಿದ್ದು, ಕ್ವಾರೆಂಟೈನ್ ವ್ಯವಸ್ಥೆಗಾಗಿ 50 ವಸತಿ ಶಾಲೆಗಳು, ಹೊಟೇಲ್‍ಗಳು ಮತ್ತು ಗ್ರಾಮೀಣ ಭಾಗದಲ್ಲಿ 7 ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಸಿಟಿವ್ ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ 67 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 150 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರೆಂಟೈನ್ ಮಾಡಲಾಗಿದೆ.