ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದು ಬೆಂದಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ.
Advertisement
ಇಂದು ಬೆಳಗ್ಗೆಯಿಂದಲೂ ಮಲೆನಾಡು ಭಾಗವಾದ ಕಳಸ, ಮೂಡಿಗೆರೆ ಹಾಗೂ ಕೊಪ್ಪ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮೋಡದ ಮಧ್ಯೆಯೂ ಸಿಕ್ಕಾಪಟ್ಟೆ ಸೆಕೆ ಕೂಡ ಇತ್ತು. ಜನ ಸಂಜೆ ವೇಳೆಗೆ ಮಳೆ ಬರಬಹುದು ಎಂದು ಭಾವಿಸಿದ್ದರು. ಅದರಂತೆ ಜಿಲ್ಲೆಯ ಕಳಸ ತಾಲೂಕಿನ ಕಳಸ, ಹೊರನಾಡು, ಹಿರೇಬೈಲು, ಹುಳುವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ.
Advertisement
Advertisement
ಭಾರೀ ಬಿಸಿಲಿನಿಂದ ಬಳಲುತ್ತಿದ್ದ ಕಾಫಿ ಗಿಡಗಳಿಗೆ ಬೆಳೆಗಾರರು ಕೂಡ ನಾನಾ ರೀತಿಯಲ್ಲಿ ನೀರಾಯಿಸುತ್ತಿದ್ದರು. ಸ್ಪ್ರಿಂಕ್ಲರ್ ಸಾವಿರಾರು ಹಣ ನೀಡಿ ಕಾಫಿಗಿಡವನ್ನು ತಣ್ಣಗೆ ಇಡಲು ಪ್ರಯತ್ನಿಸುತ್ತಿದ್ದರು. ಸದ್ಯಕ್ಕೆ ಮಲೆನಾಡಲ್ಲಿ ಕಾಫಿ-ಮೆಣಸು-ಅಡಿಕೆಗೆ ನೀರು ಬೇಕಿತ್ತು. ಆದರೆ ಸಂಜೆ ವೇಳೆಗೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಕಾಫಿ-ಅಡಿಕೆ ಬೆಳೆಗಾರರಿಗೆ ವರವಾಗಿದೆ ಹಾಗೂ ಮಳೆರಾಯ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಣ ಉಳಿಸಿದ್ದಾನೆ.
Advertisement
ಧಾರಾಕಾರವಾಗಿ ಸುರಿದ ಮಳೆಯಿಂದ ಸುಮಾರು ಇನ್ನೊಂದು ವಾರಗಳ ಕಾಲ ನೀರಾಯಿಸದಿದ್ದರೂ ಯಾವುದೇ ತೊಂದರೆ ಇಲ್ಲ. ಈ ಅಕಾಲಿಕ ಮಳೆಯಿಂದ ಮಲೆನಾಡಿಗರು ಸಂತಸಗೊಂಡಿದ್ದಾರೆ. ಆದರೆ ಈ ಸಂತೋಷದ ಮಧ್ಯೆಯೂ ಮಳೆ ಅಂದರೆ ಮಲೆನಾಡಿಗರಿಗೆ ಭಯ- ಆತಂಕ ಕೂಡ ಇದೆ. ಯಾಕೆಂದರೆ ಕಳೆದೆರಡು ವರ್ಷ ಮಳೆಯ ಅವಾಂತರಗಳನ್ನು ನೆನೆದು ಮಲೆನಾಡಿಗರು ಈ ಮಳೆಯಿಂದ ಸಂತಸಗೊಂಡರೂ ಕೂಡ ಭವಿಷ್ಯದ ಮಳೆ ಬಗ್ಗೆ ಭಯ ಹಾಗೆಯೇ ಇದೆ.