ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲೂಕಿನ ಕಳಸ ಹಾಗೂ ಕುದುರೆಮುಖ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಈ ಸೇತುವೆ ಮುಳುಗಡೆಯಾದರೆ ಕಳಸ-ಹೊರನಾಡು ಸೇರಿದಂತೆ ಹಲವು ಹಳ್ಳಿಗಳಿಗೆ ಸಂಪರ್ಕ ಕಡಿತವಾಗುತ್ತದೆ. ಬುಧವಾರ ಬೆಳಿಗ್ಗೆಯಿಂದಲೂ ಮಲೆನಾಡು ಭಾಗದಲ್ಲಿ ಮೋಡಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಆರಂಭವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿದಿತ್ತು.
Advertisement
Advertisement
ಗುರುವಾರ ಬೆಳಗ್ಗೆ ಬಿಡುವು ನೀಡಿದ ವರುಣದೇವ ಸಂಜೆ ವೇಳೆಗೆ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು ಜನ ಆತಂಕಕ್ಕೀಡಾಗಿದ್ದಾರೆ. ಮಲೆನಾಡು ಭಾಗಗಳಾದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಮೂಡಿಗೆರೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ನಾಡಿನ ಜೀವನದಿಗಳಾದ ತುಂಗಭದ್ರಾ ಹಾಗೂ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ.
Advertisement
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದೆ. ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲೆನಾಡಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಮಲೆನಾಡಿಗರು ಒಂದೆಡೆ ಕೊರೊನಾ ಮತ್ತೊಂದೆಡೆ ಮಳೆ ಆತಂಕದಿಂದ ಬದುಕುವಂತಾಗಿದೆ.