ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಾರ್ಮಾಡಿ ಘಾಟಿಯ ಮಲಯ ಮಾರುತದ ಬಳಿ ಗುಡ್ಡದ ಕಲ್ಲು-ಮಣ್ಣು ರಸ್ತೆ ಮೇಲೆ ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಎದುರಾಗಿದೆ.
ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಸದ್ಯ ಭಾರೀ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ವಾಹನ ಸವಾರರ ಆತಂಕ ಕೂಡ ಇಮ್ಮಡಿಗೊಂಡಿದೆ. ಕಳೆದ ಬಾರಿಯೂ ಇದೇ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಚಾರ್ಮಾಡಿ ಘಾಟ್ ಅಲ್ಲೋಲ ಕಲ್ಲೋಲವಾಗಿತ್ತು. ಬರೋಬ್ಬರಿ ಆರು ತಿಂಗಳುಗಳ ಕಾಲ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರವನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು.
Advertisement
Advertisement
ಚಾರ್ಮಾಡಿ ಘಾಟಿಯ ಹಲವೆಡೆ ಕೊಚ್ಚಿ ಹೋಗಿದ್ದ ರಸ್ತೆ ಕಾಮಗಾರಿಯನ್ನ ಇತ್ತೀಚಿಗಷ್ಟೇ ಮುಗಿಸಲಾಗಿತ್ತು. ಆದರೆ ಈಗ ಮತ್ತೆ ಮಳೆ ಜೋರಾಗಿದ್ದು, ಗುಡ್ಡ ಕುಸಿಯುತ್ತಿರುವುದರಿಂದ ರಸ್ತೆ ಸಂಪರ್ಕ ಮತ್ತೆ ಬಂದ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಷ್ಟೆ ಅಲ್ಲದೆ ಸಂಜೆ ಆರಂಭವಾದ ಭಾರೀ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಈ ದೈತ್ಯ ಮಳೆ ಇನ್ನೇನು ಸೃಷ್ಟಿಸುತ್ತೋ ಎಂದು ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದಾರೆ.
Advertisement
Advertisement
ಸುರಿಯುತ್ತಿರೋ ರಣ ಮಳೆ ಇಡೀ ರಾತ್ರಿ ಸುರಿಯಬಹುದೆಂದು ಸ್ಥಳೀಯರು ಊಹಿಸಿದ್ದಾರೆ. ಗುಡುಗು-ಗಾಳಿ ಇದ್ದರೆ ಮಳೆ ಕಡಿಮೆಯಾಗುತ್ತೆಂಬುದು ಗ್ರಾಮೀಣ ಜನರ ನಂಬಿಕೆ. ಆದರೆ ಮಲೆನಾಡಲ್ಲಿ ಗುಡುಗು-ಮಿಂಚು-ಗಾಳಿ ಏನೂ ಇಲ್ಲದೆ ಸುರಿಯುತ್ತಿರೋ ಮಳೆ ಇಡೀ ರಾತ್ರಿ ಬರಬಹುದೆಂದು ಸ್ಥಳೀಯರು ಭಾವಿಸಿದ್ದಾರೆ.