ಭೋಪಾಲ್: ಮಲಗಿದ್ದ ಪತಿಯ ಮುಖದ ಮೇಲೆ ಪತ್ನಿ ಬಿಸಿ ಬಿಸಿ ಎಣ್ಣೆ ಸುರಿದ ಘಟನೆಯೊಂದು ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿ ಶಿವಕುಮಾರಿ ಅಹಿರ್ವಾರ್(35) ತನ್ನ ಪತಿ ಅರವಿಂದ್ ಅಹಿರ್ವಾರ್(38) ಮುಖದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ. ಬಿಸಿ ಎಣ್ಣೆ ಸುರಿದ ಪರಿಣಾಮ ಅರವಿಂದ್ ಅರೆಬೆಂದ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶಿವಕುಮಾರಿ ಹಾಗೂ ಅರವಿಂದ್ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಆ ಬಳಿಕದಿಂದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆಗಾಗ್ಗೆ ಜಗಳವಾಗುತ್ತಿತ್ತು. ಆದರೆ ಇದೀಗ ಪತಿ ಮನೆಗೆ ತಡವಾಗಿ ಎಂಬ ಕಾರಣಕ್ಕೆ ಆರಂಭವಾದ ಜಗಳವು ತಾರಕಕ್ಕೇರಿ ಈ ಭಾರೀ ಅವಾಂತರಕ್ಕೆ ಕಾರಣವಾಗಿದೆ.
ಪತಿ-ಪತ್ನಿ ನಡುವಿನ ಜಗಳವನ್ನು ಕುಟುಂಬಸ್ಥರು ರಾತ್ರಿ ಮಧ್ಯ ಪ್ರವೇಶಿಸಿ ನಿಲ್ಲಿಸಿದ್ದಾರೆ. ಆದರೆ ಇಷ್ಟಕ್ಕೆ ತಣ್ಣಗಾಗದ ಪತ್ನಿ ಶಿವಕುಮಾರಿ, ಬೆಳಗ್ಗೆ 5 ಗಂಟೆಯ ಸುಮಾರಿಗೆ ಎಣ್ಣೆಯನ್ನು ಕಾಯಿಸಿ ಮಲಗಿದ್ದ ಗಂಡನ ಮುಖದ ಮೇಲೆ ಸುರಿದಿದ್ದಾಳೆ. ಸುಡುತ್ತಿದ್ದ ಎಣ್ಣೆಯಿಂದಾಗಿ ಅರವಿಂದ್ ಮುಖ ಸುಟ್ಟಿದ್ದು, ಆತ ಕಿರುಚಾಡಿದ್ದಾನೆ.
ಕೂಡಲೇ ಮನೆಯವರೆಲ್ಲರೂ ಸೇರಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರವಿಂದ್ ಕುಟುಂಬಸ್ಥರು ಶಿವಕುಮಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಟ್ಟಿನಿಂದಾಗಿ ನಾನು ತಪ್ಪು ಮಾಡಿದೆ ಎಂದು ಶಿವಕುಮಾರಿ ತಪ್ಪು ಒಪ್ಪಿಕೊಂಡಿರುವುದಾಗಿ ಆಕೆಯ ಸಹೋದರ ತಿಳಿಸಿದ್ದಾರೆ. ಮುಖಕ್ಕೆ ತೀವ್ರ ಗಾಯಗೊಂಡಿರುವ ಅರವಿಂದ್, ಈಗ ಸಾಗರ ಜಿಲ್ಲೆಯ ಬುಂದೇಲ್‍ಖಂಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.