-ಬಲವಂತವಾಗಿ ಪೋಷಕರ ಜೊತೆ ಕಳಿಸಿದ್ದ ಪೊಲೀಸರು
ತೆಹ್ರಾನ್: ಯುವಕನ ಜೊತೆ ಓಡಿ ಹೋಗಿದ್ದ 14 ವರ್ಷದ ಮಗಳನ್ನು ತಂದೆ ಕೊಲೆ ಮಾಡಿರುವ ಘಟನೆ ಇರಾನ್ ನಲ್ಲಿ ನಡೆದಿದೆ.
ರೋಮಾನಿ ಆಶ್ರಫಿ ತಂದೆಯಿಂದಲೇ ಕೊಲೆಯಾದ ಅಪ್ರಾಪ್ತೆ. ಪ್ರೇಮದ ಬಲೆಯಲ್ಲಿ ಸಿಲುಕಿದ್ದ ರೋಮಾನಿ 29 ವರ್ಷದ ಯುವಕನ ಜೊತೆ ಮನೆಬಿಟ್ಟು ಉತ್ತರ ಇರಾನ್‍ಗೆ ತೆರಳಿದ್ದಳು. ತದನಂತರ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ರೋಮಾನಿಯನ್ನು ಪೋಷಕರ ವಶಕ್ಕೆ ನೀಡಿದ್ದರು. ಆದ್ರೆ ರೋಮಾನಿ ತನ್ನ ಜೀವಕ್ಕೆ ಅಪಾಯವಿದ್ದು, ಮನೆಗೆ ಹೋಗಲಾರೆ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಳು. ಆದ್ರೂ ಪೊಲೀಸರು ಆಕೆಯನ್ನು ಬಲವಂತವಾಗಿ ಕಳಿಸಿದ್ದರು ಎಂದು ವರದಿಯಾಗಿದೆ.
ಮನೆಗೆ ಹೋದ ಮೇಲೆ ರೋಮಾನಿ ತಂದೆ ಆಶ್ರಫಿ ಮಗಳನ್ನು ಹರಿತವಾದ ಮಾರಕಾಸ್ತ್ರದಿಂದ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಅಶ್ರಫಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಪ್ರಿಯಕರ 29 ವರ್ಷದ ಯುವಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.
ರೋಮಾನಿ ಕೊಲೆಯ ಬಳಿಕ ಇರಾನ್ ಪ್ರಗತಿಪರ ಚಿಂತಕರು, ಮಹಿಳಾ ಪರ ಹೋರಾಟಗಾರರು ಆಕೆಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸರ್ಕಾರ ಕೂಡಲೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇರಾನ್ ಅಧ್ಯಕ್ಷ ಹಸನ್ ರೌಹಾನಿ ಮಹಿಳೆಯ ಸುರಕ್ಷತೆಗಾಗಿ ಕಠಿಣ ಕಾನೂನು ಜಾರಿಗೊಳಿಸಲಾಗವುದು ಎಂದು ಭರವಸೆಯನ್ನು ನೀಡಿದ್ದಾರೆ.