– ಜಾತಿಯಿಂದ ನನ್ನ ಜೀವನವನ್ನ ಹಾಳು ಮಾಡ್ತಿದ್ದಾರೆ
– ನನ್ನ ಕಾಪಾಡಿ, ಕರ್ಕೊಂಡು ಹೋಗ್ತೀರಾ ಎಂಬ ನಂಬಿಕೆ ಇದೆ
ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿದ್ದು, ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ.
ಮೀನಾಕ್ಷಿ (22) ಮೃತ ಯುವತಿ. ಈ ಘಟನೆ ಮೈಸೂರು ತಾಲೂಕಿನ ದೊಡ್ಡ ಕಾನ್ಯ ಗ್ರಾಮದಲ್ಲಿ ನಡೆದಿದೆ. ಮೃತ ಮೀನಾಕ್ಷಿ ಮೈಸೂರಿನ ಕೃಷಿ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಳು. ಆದರೆ ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಪೋಷಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮನೆಯವರು ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಯುವತಿ ಬದುಕಿದ್ದಾಗ ದೂರು ನೀಡಿದ್ದಳು. ಮೈಸೂರು ಎಸ್‍ಪಿ ಹಾಗೂ ಒಡನಾಡಿ ಸಂಸ್ಥೆಗೆ ಇ-ಮೇಲ್ ಮೂಲಕ ದೂರು ನೀಡಿದ್ದಳು. ಆದರೆ ಬುಧವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿದೆ. ಮೀನಾಕ್ಷಿ ಜೂನ್ 16 ಹಾಗೂ ಆಗಸ್ಟ್ 6 ರಂದು ಎರಡು ಬಾರಿ ಎಸ್‍ಪಿಗೆ ದೂರು ನೀಡಿದ್ದಳು.
ದೂರಿನಲ್ಲಿ ಏನಿದೆ?
ನಾನು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿರುವ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. ಅಂದಿನಿಂದಲೂ ಪ್ರತಿದಿನ ನನ್ನನ್ನು ಬೈದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇವರಿಗೆ ಜಾತಿ ಮುಖ್ಯವಾಗಿದ್ದು, ನನ್ನ ಜೀವನವನ್ನು ಹಾಳು ಮಾಡುತ್ತಿದ್ದಾರೆ. ನಾನು ಇವರಿಗೆ ತಿಳಿಸದೆ ಮದುವೆ ಆಗಬಹುದಿತ್ತು. ಆದರೆ ಪೋಷಕರ ಒಪ್ಪಿಗೆ ಪಡೆದುಕೊಂಡು ವಿವಾಹವಾಗಬೇಕು ಅಂದುಕೊಂಡಿದ್ದೆ. ಆದರೆ ನನ್ನ ಸಹೋದರರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಪೋಷಕರು ಇದನ್ನು ನೋಡಿಕೊಂಡು ಸುಮ್ಮನಿದ್ದರು ಎಂದು ದೂರಿನಲ್ಲಿ ಮೀನಾಕ್ಷಿ ಹೇಳಿಕೊಂಡಿದ್ದಾಳೆ.
ಅಲ್ಲದೇ ನನ್ನ ಸಹೋದರರು ಹೊಡೆದು ಕೊಲೆ ಮಾಡುತ್ತಾರೆ ಎಂಬ ಭಯವಾಗುತ್ತಿದೆ. ನಾನು ಕೆಎಎಸ್, ಎಫ್‍ಡಿಎ ಪರೀಕ್ಷೆಗಳಿಗೆ ಓದಿಕೊಳ್ಳುತ್ತಿದ್ದೆ. ಆದರೆ ಮನಸಿಗೆ ನೆಮ್ಮದಿ ಇಲ್ಲದಿದ್ದರಿಂದ ಓದಲು ಸಾಧ್ಯವಾಗುತ್ತಿಲ್ಲ. ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ನನಗೆ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಕಾಪಾಡಿ, ಇಲ್ಲಿಂದ ಕರೆದುಕೊಂಡು ಹೋಗುತ್ತೀರಿ ಎಂಬ ನಂಬಿಕೆಯಲ್ಲಿ ನಾನಿದ್ದೇನೆ. ದಯವಿಟ್ಟು ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಬೇಡಿ ಎಂದು ಯುವತಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಮೀನಾಕ್ಷಿ ಬೇರೆ ಜಾತಿಯ ಯುವಕನನ್ನು ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಳು. ಇದರಿಂದ ಪೋಷಕರು ಮೀನಾಕ್ಷಿಯನ್ನ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಈ ಕುರಿತು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.