– ಆರು ತಿಂಗಳ ಹಿಂದೆ ಮದ್ವೆಯಾಗಿದ್ದ ಬ್ಯಾಂಕ್ ಉದ್ಯೋಗಿಗಳು
– ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದು ತಪ್ಪಾಯ್ತು
– ಪತ್ನಿ ಸಾವು, ಗಂಭೀರ ಸ್ಥಿತಿಯಲ್ಲಿರೂ ಪತಿಗೆ ಚಿಕಿತ್ಸೆ
ಕೊಪ್ಪಳ: ಜಿಲ್ಲೆಯ ಕಾರಟಗಿಯಲ್ಲಿ ನಡೆದ ಮಾರಣಾಂತಿಕ ದಾಳಿ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕೊಲೆಯಾದ ಮಹಿಳೆಯ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ತಮ್ಮನೇ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಸೋದರಿ ತ್ರಿವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ತ್ರಿವೇಣಿ ಪತಿ ವಿನೋದ್ ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಿನಾಶ್ ಸೋದರಿಯನ್ನ ಕೊಲೆಗೈದ ಕ್ರೂರಿ ತಮ್ಮ. ಮುಧೋಳ ತಾಲೂಕಿನ ನಿವಾಸಿಗಳಾಗಿದ್ದ ವಿನೋದ್ (30) ಮತ್ತು ತ್ರಿವೇಣಿ (35) ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಐದು ವರ್ಷ ಸೀನಿಯರ್ ಆಗಿದ್ದ ತ್ರಿವೇಣಿ ತಮ್ಮ ಜೂನಿಯರ್ ವಿನೋದ್ ಅವರನ್ನ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ವಯಸ್ಸು ಅಡ್ಡಿಯಾಗಿರಲಿಲ್ಲ. ಆದ್ರೆ ಮದುವೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಆರು ತಿಂಗಳ ಹಿಂದೆ ವಿನೋದ್ ಮತ್ತು ತ್ರಿವೇಣಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು.
ಮದುವೆ ಬಳಿಕ ತ್ರಿವೇಣಿ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಗ್ರಾಮದಲ್ಲಿ ತ್ರಿವೇಣಿ ಮದುವೆ ಫೋಟೋ ನೋಡಿದ್ದ ಜನರು ಮಾತನಾಡಕೊಳ್ಳಲಾರಂಭಿಸಿದ್ದರು. ಇದರಿಂದ ಅವಮಾನಿತನಾದ ಅವಿನಾಶ್, ಅಕ್ಕ ಮತ್ತು ಮಾವನ ಕೊಲೆಗೆ ನಿರ್ಧರಿಸಿ, ಎರಡು ದಿನಗಳ ಹಿಂದೆ ಸ್ನೇಹಿತರ ಜೊತೆ ಕಾರಟಗಿ ಬಂದಿದ್ದನು. ಎರಡು ದಿನ ಅಕ್ಕನ ಚಲನವಲನ ಗಮನಿಸಿ ಶನಿವಾರ ದಾಳಿ ನಡೆಸಿ ಕೊಲೆಗೈದಿದ್ದಾನೆ.
ಸದ್ಯ ಪೊಲೀಸರು ಆರೋಪಿ ಅವಿನಾಶ್ ನನ್ನು ಬಂಧಿಸಿ, ಇನ್ನಿಬ್ಬರು ಪರಾರಿಯಾಗಿದ್ದಾರೆ. ತಮ್ಮನೇ ಅಕ್ಕನನ್ನು ಕೊಲೆ ಮಾಡಿದ್ದರಿಂದ ತ್ರಿವೇಣಿ ಶವವನ್ನ ವಶಕ್ಕೆ ಪಡೆಯಲು ಯಾರು ಮುಂದಾಗಿಲ್ಲ.
ಇಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಕಾರಟಗಿಯಲ್ಲಿ ವಾಸವಾಗಿದ್ದರು. ವಿನೋದ್ ಕಾರಟಗಿಯ ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ತ್ರಿವೇಣಿ ಬಳ್ಳಾರಿ ಸಿರಗುಪ್ಪದ ಬಿರೇಶ್ವರ ಪತ್ತಿನ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ತಮ್ಮ ಕೆಲಸ ಮುಗಿಸಿಕೊಂಡು ದಂಪತಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯ ಪರಿಣಾಮ ತ್ರೀವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳು ವಿನೋದ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯಿಂದ ಬಳ್ಳಾರಿಗೆ ರವಾನಿಸಲಾಗಿದೆ.