ಕೋಲಾರ: ತಾನು ಹೆತ್ತ ಮರಿ ಮೃತಪಟ್ಟು ಹಲವು ದಿನಗಳೇ ಕಳೆದರೂ ತನ್ನ ಮರಿಯನ್ನು ಬಿಡದೇ ತಾಯಿ ಕೋತಿ ತನ್ನೊಡಲಲ್ಲೇ ಹೊತ್ತು ತಿರುಗಾಡುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಸಂಜೆ ಈ ಘಟನೆ ನಡೆದಿದ್ದು, ಮೃತಪಟ್ಟ ಮರಿಯನ್ನು ತಾಯಿ ಕೋತಿ ಕಳೆದ 4-5 ದಿನಗಳಿಂದ ಹೊತ್ತುಕೊಂಡೇ ಓಡಾಡುತ್ತಿದೆ. ತನ್ನ ಮರಿ ಇನ್ನೂ ಬದುಕಿದೆ ಎಂದುಕೊಂಡು ತನ್ನೊಡಲಲ್ಲಿ ಇಟ್ಟುಕೊಂಡು ಪೋಷಣೆ ಮಾಡುತ್ತಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಮಹಿಳಾ ದಿನಾಚರಣೆ ದಿನ ತಾಯಿ ಪ್ರೀತಿಗೆ ಮನಸೋತ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದೇನು ಹೀಗೆ ಇಟ್ಟುಕೊಂಡು ಓಡಾಡುತ್ತಿದೆ ಎಂದು ಮರುಗಿದರು. ಮೃತಪಟ್ಟು ವಾಸನೆ ಬಂದರೂ ತನ್ನ ಮಗುವನ್ನು ಬಿಗಿದಪ್ಪಿಕೊಳ್ಳುತ್ತಿರುವ ತಾಯಿ ಕೋತಿಯ ಪ್ರೀತಿ ಮನ ಕಲಕುವಂತಿತ್ತು.



