– ಕನ್ನಡ ಸಂಘಟನೆಗಳಿಂದ ನಾಳೆ ಪ್ರತಿಭಟನೆ
ಬೆಂಗಳೂರು: ರಾಜ್ಯದಲ್ಲೀಗ ಪ್ರಾಧಿಕಾರ ಮತ್ತು ಮೀಸಲು ಪಾಲಿಟಿಕ್ಸ್ ಜೋರಾಗ್ತಿದೆ. ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಲೇ, ವೀರಶೈವ ಲಿಂಗಾಯತರು ಧ್ವನಿ ಮುನ್ನಲೆಗೆ ಬಂದಿದೆ. ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಸೋಮಣ್ಣ, ಬಿಸಿ ಪಾಟೀಲ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಅವರಿದ್ದ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿದೆ.
Advertisement
ಮರಾಠ ಅಭಿವೃದ್ಧಿ ಪ್ರಾಧಿಕಾರ ಸಮರ್ಥಿಸುತ್ತಲೇ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಕೋರಿದ್ದಾರೆ. ಜೊತೆಗೆ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಮನವಿ ಮಾಡಿದ್ದಾರೆ. ಬಿಜೆಪಿಯವರ ಈ ಪ್ರಾಧಿಕಾರದ ಅಸ್ತ್ರಕ್ಕೆ ವಿಪಕ್ಷಗಳು ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿವೆ.
Advertisement
Advertisement
ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇಕಡಾ 16ರಷ್ಟು ಮೀಸಲಾತಿ ನೀಡಿದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಲಿಂಗಾಯತರಿಗೆ ಶೇಕಡಾ 16ರಷ್ಟು ಮೀಸಲಾತಿ ನೀಡಬೇಕೆಂಬ ಬಸವರಾಜ್ ಹೊರಟ್ಟಿ ಕೂಗಿಗೆ ಮಾಜಿ ಮಂತ್ರಿ ಎಂಬಿ ಪಾಟೀಲ್ ಧ್ವನಿ ಗೂಡಿಸಿದ್ದಾರೆ. ಇಂದು ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ. ಕೆಲವರ ಬೇಡಿಕೆಯಂತೆ ಲಿಂಗಾಯತರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ, 100-200ಕೋಟಿ ಅನುದಾನ ಒದಗಿಸಿದರೆ, ಹೆಚ್ಚಿನ ಪ್ರಯೋಜನ ಆಗಲ್ಲ. ಇದ್ರ ಬದಲು ಲಿಂಗಾಯತರಿಗೆ ಶೇಕಡಾ 16ರಷ್ಟು ಮೀಸಲಾತಿ ನೀಡ್ಬೇಕು ಅಂತಾ ಆಗ್ರಹಿಸಿದ್ದಾರೆ. ಈ ಬೆಳವಣಿಗೆಯಿಂದ ಸಿಎಂ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.
Advertisement
ನಾರಾಯಣಗೌಡ ಎಚ್ಚರಿಕೆ: ಸಚಿವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. ಮರಾಠ ಪ್ರಾಧಿಕಾರ ರಚನೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಆಗ್ರಹಿಸಿದೆ. ಕನ್ನಡಿಗರ ಸ್ವಾಭಿಮಾನ ಕೆರಳಿಸಬೇಡಿ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಕರವೇ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ಬಿಎಸ್‍ವೈ ಸರ್ಕಾರ ತಾರತಮ್ಯ ಮಾಡುತ್ತಿದೆ. ಕನ್ನಡಿಗರ ಮೇಲೆ ಸವಾರಿ ಮಾಡಲು ಮರಾಠಿಗರಿಗೆ ರಾಜ್ಯ ಸರ್ಕಾರವೇ ಪ್ರೋತ್ಸಾಹ ಕೊಟ್ಟಂತಿದೆ ಎಂದು ಕರವೇ ಪ್ರವೀಣ್ ಶೆಟ್ಟಿ ಆಪಾದಿಸಿದ್ದಾರೆ. ಇವತ್ತು ಮರಾಠ ಸಮುದಾಯಕ್ಕೆ, ನಾಳೆ ಮಾರ್ವಾಡಿಗಳಿಗೆ, ತಮಿಳರಿಗೆ, ತೆಲುಗಿನವರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ರೆ ಕನ್ನಡಿಗರ ಪರಿಸ್ಥಿತಿ ಏನು? ಕೇರಳ, ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ನಾಶ ಮಾಡ್ತಿದ್ದಾರೆ. ಅವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ಆಯೋಜಿಸಲಾಗಿದೆ. ಇನ್ನು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ಮಾಡಲಾಗಿದೆ.
‘ಮಹಾ’ ಮೀಸಲಿಗೆ ಸುಪ್ರೀಂ ತಡೆ: ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇಕಡಾ 16ರಷ್ಟು ಮೀಸಲಾತಿ ನೀಡಲು ಸಾಧ್ಯನಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಕಾಂಗ್ರೆಸ್ ಮಹಾರಾಷ್ಟ್ರ ಮಾದರಿಯನ್ನು ಪ್ರಸ್ತಾಪಿಸಿದೆ. ಆದರೆ ಮಹಾರಾಷ್ಟ್ರ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ಎರಡು ತಿಂಗಳ ಹಿಂದೆಯೇ ರೆಡ್ ಸಿಗ್ನಲ್ ನೀಡಿದೆ.
2018ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮರಾಠಿಗರಿಗೆ ಮಹಾ ಮೀಸಲಾತಿ ನೀಡಿತ್ತು. ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ಆದೇಶ ಮಹಾರಾಷ್ಟ್ರ ವಿಧಾನಸಭೆಯಲ್ಲಿ 2018ರ ನ.30ರಂದು ಬಿಲ್ ಪಾಸ್ ಮಾಡಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಹಲವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಶೇಕಡಾ 16ರಷ್ಟು ಮೀಸಲಾತಿ ಸರಿಯಲ್ಲ ಎಂದು 2019ರ ಜುಲೈನಲ್ಲಿ ಬಾಂಬೈ ಹೈಕೋರ್ಟ್ ತೀರ್ಪು ನೀಡಿತ್ತು.
ಉದ್ಯೋಗದಲ್ಲಿ ಶೇ.12ರಷ್ಟು, ಶಿಕ್ಷಣದಲ್ಲಿ ಶೇ.13ರಷ್ಟು ಮೀರದಂತೆ ಮೀಸಲಾತಿಗೆ ಸೂಚನೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿತ್ತು. ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. 2020ರ ಸೆ.09ರಂದು ಬಾಂಬೆ ಹೈಕೋರ್ಟ್ ತೀರ್ಪುನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಮರಾಠಿಗರಿಗೆ ಶೇ. 16ರಷ್ಟು ಮೀಸಲಾತಿ ಜಾರಿಗೊಳಿಸದಂತೆ ಮಹಾ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದ್ರೆ 2018ರಿಂದ ಮೀಸಲಾತಿ ಲಾಭ ಪಡೆದವರಿಗೆ ತೊಂದರೆ ಕೊಡದಂತೆ ಸೂಚನೆ ನೀಡಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸಾಂವಿಧಾನಿಕ ಪೀಠ ರಚನೆ ಮಾಡಲಾಗಿದೆ.