– ಎನ್‍ಎಸ್ ಯುಐನಿಂದ ಷಡ್ಯಂತ್ರ ಎಂದ ಎಬಿವಿಪಿ
ಚೆನ್ನೈ: ಪಾರ್ಕಿಂಗ್ ವಿಚಾರಕ್ಕೆ ಉಂಟಾದ ಜಗಳ ತಾರಕಕ್ಕೇರಿದ್ದು, 62 ವರ್ಷದ ಮಹಿಳೆಯೊಬ್ಬರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಸಿಟಿವಿ ವಿಡಿಯೋ ಹಾಗೂ ಕೆಲ ಫೋಟೋಗಳ ಸಮೇತ ದೂರು ನೀಡಿರುವ ಮಹಿಳೆ, ಸುಬ್ಬಯ್ಯ ಅವರು ನನ್ನ ಮನೆಯ ಎದುರೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಅಲ್ಲದೆ ಬಳಸಿದ ಮಾಸ್ಕ್ ಗಳನ್ನು ಎಸೆಯುತ್ತಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಅದಂಬಕ್ಕಂ ಪೊಲೀಸ್ ಠಾಣೆಯಲ್ಲಿ ಜುಲೈ 11 ರಂದು ಪ್ರಕರಣ ದಾಖಲಾಗಿದೆ.
Advertisement
Advertisement
ಸ್ಟ್ಯಾಂಡ್ ಅಪ್ ಕಾಮಿಡಿಯನ್ ವಿಜಯ್ ರಾಘವನ್ ತನ್ನ ಸಂಬಂಧಿಗೆ ಎದುರಾದ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಈ ವಿಚಾರ ಭಾರೀ ವೈರಲ್ ಆಗಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ.
Advertisement
ಮೊದಲು ಸುಬ್ಬಯ್ಯ ಅವರು ಪಕ್ಕದ ಮನೆಯ ಮಹಿಳೆಗೆ ಸೇರಿದ ಪಾರ್ಕಿಂಗ್ ಜಾಗವನ್ನು ಬಳಸಿಕೊಳ್ಳಲು ಅನುಮತಿ ಕೇಳಿದ್ದಾರೆ. ಈ ವೇಳೆ ಮಹಿಳೆ, ತಿಂಗಳಿಗೆ 1,500 ರೂ. ನೀಡಿ ಜಾಗವನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಸುಬ್ಬಯ್ಯ ಅವರು ಬಳಸಿದ ಮಾಸ್ಕ್ ಹಾಗೂ ಬೇವಿನ ಎಲೆಗಳನ್ನು ನನ್ನ ಮನೆ ಎದುರಿಗೆ ಬಿಸಾಕುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Advertisement
ಸುಬ್ಬಯ್ಯ ಅವರು ಕೇವಲ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಮಾತ್ರವಲ್ಲ ಕಿಲಿಪಾಕ್ ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಕೂಡ ಹೌದು.
ಈ ಸಂಬಂಧ ಡಿಎಂಕೆ ನಾಯಕಿ ಕನಿಮೋಳಿ ಟ್ವೀಟ್ ಮಾಡಿ, ಬಲಪಂಥೀಯರ ವಿರುದ್ಧ ದೂರು ಕೇಳಿ ಬಂದರೆ ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದು ಸರ್ವೇ ಸಾಮಾನ್ಯ ವಿಚಾರವಾಗಿದೆ. ಈ ಸಂಬಂಧ ತಮಿಳುನಾಡಿನ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಕಾನೂನಿನ ಮುಂದೆ ಎಲ್ಲರನ್ನೂ ಸಮಾನವಾಗಿ ಕಾಣುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತ ಸುಬ್ಬಯ್ಯ ವಿರುದ್ಧದ ಆರೋಪವನ್ನು ಎಬಿವಿಪಿ ಅಲ್ಲಗೆಳೆದಿದ್ದು, ಸಿಸಿಟಿವಿ ದೃಶ್ಯ ನಕಲಿಯಾಗಿದ್ದು, ಇದನ್ನು ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆಯಾದ ಎನ್‍ಎಸ್‍ಯುಐ ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೆ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಅಪಪ್ರಚಾರ ಮತ್ತು ಅವರ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಪ್ರಕರಣ ಸಂಬಂಧ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ ಮಾತನಾಡಿ, ಎನ್‍ಎಸ್‍ಯುಐ ನಕಲಿ ವಿಡಿಯೋವನ್ನು ಇಟ್ಟುಕೊಂಡು ಡಾ. ಸುಬ್ಬಯ್ಯ ವಿರುದ್ಧ ದುರುದ್ದೇಶಪೂರಿತ, ಅವಹೇಳನಕಾರಿ ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಹಿಳೆಯ ಆರೋಪದ ಸಂಬಂಧ ತನಿಖೆ ನಡೆಸಬೇಕು ಎಂದು ಎಬಿವಿಪಿ ಕೂಡ ಒತ್ತಾಯಿಸುತ್ತಿದೆ ಎಂದರು.
ಸದ್ಯ ಮಹಿಳೆಯ ದೂರಿನಂತೆ ಡಾ. ಸುಬ್ಬಯ್ಯ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.