ಬಳ್ಳಾರಿ: ಮನೆಗೆಲಸಕ್ಕೆ ಹೋದ ಮಹಿಳೆ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನಾಗಮ್ಮ (35) ಎಂದು ಗುರುತಿಸಲಾಗಿದೆ. ಈಕೆಯ ಮೃತದೇಹ ನಗರದ 8ನೇ ವಾರ್ಡ್‍ನ ಮಲ್ಲಿಕಾರ್ಜುನ್ ಕಲ್ಯಾಣಮಂಟಪ ಬಳಿಪತ್ತೆಯಾಗಿದೆ.
ನಗರದಲ್ಲಿ ಬೇರೆಯವರ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಾಗಮ್ಮ ಎಂದಿನಂತೆ ನಿನ್ನೆ ಮನೆಕೆಲಸಕ್ಕೆ ಹೋಗಿದ್ದಳು. ಆದರೆ ನಾಗಮ್ಮ ನಿನ್ನೆ ರಾತ್ರಿ ಮನೆ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಬರ್ಬರ ಹತ್ಯೆ ಮಾಡಿದ್ದಾರೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾರೆ.
ದಾರಿಹೋಕರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕಂಪ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.