ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಎಲ್ಲೂ ಹೋಗಲಾರದೆ ಜಿಟಿ ಜಿಟಿ ಮಳೆಯಲ್ಲಿ ವೃದ್ಧೆ ರಸ್ತೆಯಲ್ಲೇ ಪರದಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಮನೆಯಿಂದ ಹೊರಹಾಕಿರುವ ಪಾಪಿ ಮಗನ ನಿಷ್ಕಕಾಳಜಿಯಿಂದ ನಗರದ ಮೇದರವಾಡಿ ನಿವಾಸಿ ಈರಮ್ಮ ನಗರ ಕೇಂದ್ರ ಬಸ್ ನಿಲ್ದಾಣದ ಬಳಿ ಮಳೆಯಲ್ಲಿ ನರಳಾಡಿದ್ದಾರೆ.
ವೃದ್ಧೆಯ ನರಳಾಟ ಕಂಡು ಸಾರ್ವಜನಿಕರು ಬಸ್ ನಿಲ್ದಾಣದ ಒಳಗೆ ತಂದು ಬಿಟ್ಟಿದ್ದಾರೆ. ಆದರೆ ನಗರದಲ್ಲಿ ಮಳೆ ಇರುವುದರಿಂದ ಬಸ್ ನಿಲ್ದಾಣದಲ್ಲಿ ಚಳಿಯಿಂದ ವೃದ್ಧೆ ನಡುಗುತ್ತ ಕುಳಿತುಕೊಂಡೇ ನರಳಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮಾಹಿತಿ ಮೇರೆಗೆ ಸಹಾಯಕ್ಕೆ ಮುಂದಾದ ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರದ ಸಿಬ್ಬಂದಿ ವೃದ್ಧೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದೆ. ಆರೋಗ್ಯ ತಪಾಸಣೆ ಬಳಿಕ ನಿರಾಶ್ರಿತರ ಕೇಂದ್ರಕ್ಕೆ ವೃದ್ಧೆಯನ್ನು ಕರೆದೊಯ್ಯಲು ಕೇಂದ್ರದ ಸಿಬ್ಬಂದಿಗೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳು ಲಾಕ್‍ಡೌನ್ ಆಗಿವೆ. ಮಧ್ಯಾಹ್ನ 2 ಗಂಟೆವೆರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟ ನಡೆಯುತ್ತದೆ. ಅದನ್ನು ಹೊರತುಪಡಿಸಿ ಉಳಿದೆಲ್ಲ ವ್ಯವಹಾರಗಳು ಸಂಪೂರ್ಣ ಬಂದ್ ಆಗಿವೆ. ರಾಯಚೂರು ನಗರದಲ್ಲಿ ಮಳೆ ನಡುವೆಯೇ ಜನ ಅಗತ್ಯ ವಸ್ತುಗಳನ್ನು ಕೊಳ್ಳಲು ಓಡಾಡುತ್ತಿದ್ದಾರೆ. ಬಸ್ ಹಾಗೂ ಆಟೋ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಜಿಲ್ಲಾಡಳಿತ ಈ ಮೊದಲು ಕೇವಲ ನಗರ ಸಾರಿಗೆ ಮಾತ್ರ ಬಂದ್ ಮಾಡುವುದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಆದರೆ ಮಂಗಳವಾರ ರಾತ್ರಿ ಎಲ್ಲ ಬಸ್‍ಗಳ ಓಡಾಟಕ್ಕೂ ಬ್ರೇಕ್ ಹಾಕಿದೆ. ಹೀಗಾಗಿ ಮಾಹಿತಿಯಿಲ್ಲದೆ ನಗರದಿಂದ ಹೊರಗಡೆ ಹೋಗಲು ಖಾಸಗಿ ವಾಹನಗಳಿಗೆ ಅವಕಾಶ ಇಲ್ಲದಿರುವುದರಿಂದ ಬೇರೆ ಊರುಗಳಿಗೆ ಹೋಗುವವರು ಬಸ್ ಇಲ್ಲದೆ ಪರದಾಡುತ್ತಿದ್ದಾರೆ.