– ಚಾಕುವಿನಿಂದ ಇರಿದು ಬರ್ಬರ ಕೊಲೆ
ಶಿವಮೊಗ್ಗ: ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ವೇಳೆ ತಾಯಿ, ಮಗನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ.
ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ಘಟನೆ ನಡೆದಿದ್ದು, ಮೃತಪಟ್ಟವರನ್ನು ಬಂಗಾರಮ್ಮ(60), ಪ್ರವೀಣ್ (35) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪ್ರವೀಣ್, ಹಳೆ ಇಕ್ಕೇರಿ ಗ್ರಾಮದ ಮನೆಯಲ್ಲಿ ತಾಯಿ, ಪತ್ನಿ ಹಾಗೂ 10 ತಿಂಗಳ ಮಗುವಿನೊಂದಿಗೆ ವಾಸವಾಗಿದ್ದ. ಶನಿವಾರ ರಾತ್ರಿ ಎಂದಿನಂತೆ ಕುಟುಂಬಸ್ಥರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ ನಂತರ ನಿದ್ದೆಗೆ ಜಾರಿದ್ದಾರೆ. ಆದರೆ ನಸುಕಿನ ಜಾವ ತಾಯಿ, ಮಗನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಮೃತ ಪ್ರವೀಣ್ ಪತ್ನಿ ಹಾಗೂ ಆತನ 10 ತಿಂಗಳ ಮಗುವನ್ನು ಏನೂ ಮಾಡಿಲ್ಲ. ತಾಯಿ, ಮಗನನ್ನು ಮಾತ್ರ ಕೊಲೆ ಮಾಡಿದ್ದಾರೆ. ಅಲ್ಲದೆ ಕೊಲೆಗಾರರು ಘಟನೆ ಬಳಿಕ ಮನೆಯಲ್ಲಿನ ಯಾವುದೇ ವಸ್ತುವನ್ನು ಸಹ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ ಘಟನೆಗೆ ಸ್ಪಷ್ಟ ಕಾರಣ ತಿಳಿಯುತ್ತಿಲ್ಲ. ಪೊಲೀಸರು ಪ್ರಕರಣದ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯಾದ ತಾಯಿ ಮಗನ ಶವವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಲಾಗಿದೆ.