– ಓದು ಅಂತ ಬುದ್ಧಿ ಹೇಳಿದ್ದಕ್ಕೆ ಹಣದೊಂದಿಗೆ ಪರಾರಿ
ಗಾಂಧಿನಗರ: ಮಕ್ಕಳನ್ನು ಓದುವಂತೆ ಪೋಷಕರು ಬೈಯುವುದು ಸಾಮಾನ್ಯ. ಈ ಬೈಗುಳ ಕೆಲವೊಮ್ಮೆ ನೋವುಂಟು ಮಾಡುತ್ತದೆ. ಆದರೆ ಪೋಷಕರು ನಮಗೆ ಬುದ್ಧಿ ಹೇಳುವುದು ನಮ್ಮ ಒಳಿತಿಗಾಗಿಯೇ ಆಗಿರುತ್ತದೆ. ಅದೇ ರೀತಿ ಗುಜರಾತ್ ನ ವಡೋದರಾದ ಹುಡುಗನೊಬ್ಬ ಹೆತ್ತವರು ಬೈದರೆಂದು ಸಿಟ್ಟಿನಿಂದ ಮನೆಯಿಂದ ಎಸ್ಕೇಪ್ ಆಗಿ ಗೋವಾದಲ್ಲಿ ಪಾರ್ಟಿ ಮಾಡಿರುವ ಅಚ್ಚರಿಯ ಘಟನೆಯೊಂದು ನಡೆದಿದೆ.
ಹೌದು. ಈ ಘಟನೆ ನಡೆದು ಕೆಲ ದಿನಗಳಾದರೂ ಇದೀಗ ಭಾರೀ ಸುದ್ದಿಯಲ್ಲಿದೆ. ಕಳೆದ ವಾರ ಪೋಷಕರು ಹಾಗೂ ಅಜ್ಜ-ಅಜ್ಜಿ 14 ವರ್ಷದ ಬಾಲಕನಿಗೆ ಓದುವಂತೆ ಬುದ್ಧಿ ಹೇಳಿದ್ದಾರೆ. ಆದರೆ ಇದರಿಂದ ನೊಂದ 10ನೇ ತರಗತಿ ಬಾಲಕ ರೈಲು ಹತ್ತಿ ಗೋವಾಗೆ ತೆರಳಲಲು ಪ್ಲಾನ್ ಮಾಡಿದ್ದಾನೆ. ಅಂತೆಯೇ ವಡೋದರಾ ರೈಲ್ವೇ ನಿಲ್ದಾಣಕ್ಕೂ ಬಂದಿದ್ದಾನೆ. ಆದರೆ ಬಾಲಕನಲ್ಲಿ ಆಧಾರ್ ಕಾರ್ಡ್ ಇಲ್ಲದಿದ್ದರಿಂದ ಆತನಿಗೆ ಟಿಕೆಟ್ ಸಿಕ್ಕಿರಲಿಲ್ಲ. ನಂತರ ಆತ ಪುಣೆಗೆ ಬಸ್ಸಿನಲ್ಲಿ ತೆರಳಲು ನಿರ್ಧರಿಸಿದ್ದಾನೆ. ಅಲ್ಲಿಂದ ಗೋವಾಕ್ಕೆ ಮತ್ತೊಂದು ಬಸ್ ಹತ್ತಿದ್ದಾನೆ.
ಗೋವಾಕ್ಕೆ ತಲುಪಿದ ಬಾಲಕ ಅಲ್ಲಿ ಕ್ಲಬ್, ರೆಸ್ಟೋರೆಂಟ್ ನಲ್ಲಿ ಸುತ್ತಾಡಿಕೊಂಡು ಎಂಜಾಯ್ ಮಾಡಿದ್ದಾನೆ. ತನ್ನ ಕೈಯಲ್ಲಿದ್ದ ಹಣವೆಲ್ಲ ಮುಗಿಯುತ್ತಿದ್ದಂತೆಯೇ ಆತ ಮತ್ತೆ ಪುಣೆಯತ್ತ ಬರಲು ತಿರ್ಮಾನಿಸಿದ್ದಾನೆ. ಅಲ್ಲದೆ ಹೊಸ ಸಿಮ್ ಕಾರ್ಡ್ ತೆಗೆದುಕೊಂಡಿದ್ದಾನೆ.
ಇತ್ತ ಮಗನನ್ನು ಹುಡುಕಾಡಿ ಬೇಸತ್ತ ಪೋಷಕರು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಪೋಷಕರಿಗೆ ಮತ್ತೊಂದು ಶಾಕ್ ಕಾದಿದ್ದು, ಮನೆಯಲ್ಲಿದ್ದ 1.5 ಲಕ್ಷ ರೂ. ನಗದು ಕೂಡ ಕಾಣೆಯಾಗಿತ್ತು. ಪೋಷಕರ ದೂರು ದಾಖಲಿಸಿಕೊಂಡ ಪೊಲೀಸರು ಬಾಲಕನ ಪತ್ತೆಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಬಾಲಕನ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಎಂದು ಬರುತ್ತಿದ್ದರಿಂದ ಪೊಲೀಸರಿಗೆ ಆತನ ಪತ್ತೆ ಮಾಡಲು ಅಸಾಧ್ಯವಾಗಿತ್ತು.
ಇನ್ನು ಬಾಲಕ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡು ಹೊಸ ಸಿಮ್ ತೆಗೆದುಕೊಳ್ಳುತ್ತಿದ್ದಂತೆಯೇ ಟ್ರೇಸ್ ಮಾಡಿದ್ದ ಪೊಲೀಸರು, ಪುಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಹೀಗಾಗಿ ಕೂಡಲೇ ಪೊಲೀಸರು ಬಾಲಕನ ಪತ್ತೆ ಮಾಡಿದ್ದಾರೆ. ಅಲ್ಲದೆ ವಡೋದರ ಪೊಲೀಸರಿಗೆ ಬಾಲಕನನ್ನು ಒಪ್ಪಿಸಿದ್ದಾರೆ.