ಗದಗ: ಸಮಸ್ಯೆ ಹೇಳಿಕೊಂಡು ಫೋನ್ ಮಾಡಿದ ಜಿಲ್ಲೆಯ ಸವಡಿ ಗ್ರಾಮ ಪಂಚಾಯತಿ ಸದಸ್ಯರಿಗೆ ಸಚಿವ ವಿ.ಸೋಮಣ್ಣ ಖಾರವಾಗಿ ಮಾತನಾಡಿದ್ದಾರೆ. ಗ್ರಾಮ ಪಂಚಾಯತ್ ಮೇಂಬರ್ ಆದರೆ ನೀನೇನು ದೇವ್ರೆನಪ್ಪ ಅಂತಾ ಸಿಟ್ಟಿನಲ್ಲಿ ಉತ್ತರಿಸಿದ್ದಾರೆ.
ಸವಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ನೂರಾರು ಮನೆಗಳು ನಿರ್ಮಾಣವಾಗುತ್ತಿವೆ. ಅವುಗಳಿಗೆ 3 ಹಂತದಲ್ಲಿ ಬಿಲ್ ಆಗಬೇಕು. ಮನೆಗಳು ಪೂರ್ಣ ಹಂತಕ್ಕೆ ಬಂದರೂ ಬಿಲ್ ಆಗಿರಲಿಲ್ಲ. ಈ ಬಗ್ಗೆ ಫಲಾನುಭವಿಗಳು ಗ್ರಾಮ ಪಂಚಾಯತ್ ಸದಸ್ಯರನ್ನು ಪದೇ ಪದೇ ಕೇಳುತ್ತಿದ್ದರು. ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದೆ. ಕೋವಿಡ್ ನೆಪದಲ್ಲಿ ಅಧಿಕಾರಿಗಳು ಇತರೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುತ್ತಿಲ್ಲ. ಮನೆಗಳ ಬಿಲ್ ಬಗ್ಗೆ ಕೇಳಲು ಹೋದರೆ, ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಇದರಿಂದ ಗ್ರಾಮ ಪಂಚಾಯತಿ ಸದಸ್ಯ ಮೊಹ್ಮದ್ ರಫಿಕ್ ಕರ್ನಾಚಿ ಎಂಬವರು ಸಚಿವ ಸೋಮಣ್ಣ ಅವರಿಗೆ ಫೋನ್ ಮಾಡಿದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ ಮಾತಾಡಿದ ಸಚಿವರು, ನಾನು ಗ್ರಾಮ ಪಂಚಾಯತಿ ಸದಸ್ಯ ಅಂತಾ ಮೊಹ್ಮದ್ ಹೇಳಿದ ಕೂಡಲೇ ಗರಂ ಆಗಿ, ಮೇಂಬರ್ ಆದರೆ ನೀನೇನು ದೇವ್ರಾ ಅಂತಾ ಗದರಿ, ಬಿಲ್ ಬರಲಿಲ್ಲ ಅಂದರೆ ಪಿಡಿಓ ಕೇಳುತ್ತಾರೆ. ನೀನಲ್ಲಾ, ಫೋನ್ ಪಿಡಿಓ ಕೈನಲ್ಲಿ ಕೊಡು ಅಂತಾ ಏಕವಚನದಲ್ಲಿಯೇ ಮಾತಾನಾಡಿದ್ದಾರೆ.
ನಾವು ಯಾವುದನ್ನು ಪೆಂಡಿಂಗ್ ಇಟ್ಟುಕೊಂಡಿಲ್ಲ. ಎಲ್ಲಾ ಕೆಲಸ ಮಾಡುತ್ತಿದ್ದೇವೆ. ಪಿಡಿಓಗೆ ಫೋನ್ ಕೊಡು ಅಂದಿದ್ದಾರೆ. ಪಿಡಿಓ ಅವರು ಸರಿಯಾಗಿ ಬರುತ್ತಿಲ್ಲ ಅಂದ ಕೂಡಲೇ, ಅದೇನಿದೆ ರಿಪೋರ್ಟ್ ಹಾಕು ತನಿಖೆ ಮಾಡಿಸುತ್ತೇನೆ ಎಂದು ಗರಂ ಮಾತುಗಳನ್ನಾಡಿದರು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಸಂಕಷ್ಟದಲ್ಲಿರುವ ಜನರ ಪರವಾಗಿ ನಿಂತ ಗ್ರಾಮ ಪಂಚಾಯತ್ ಸದಸ್ಯನಿಗೆ ಸಚಿವರು ಹೀಗೆ ಮಾತಾನಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಉರುಳಾದ ಜೋಕಾಲಿ – ಕ್ಷಣಾರ್ಧದಲ್ಲಿ ಹೋಯ್ತು ಬಾಲಕನ ಜೀವ