ಮನೀಶ್ ಪಾಂಡೆ, ಶಂಕರ್ ದಾಖಲೆಯ ಜೊತೆಯಾಟ – ಹೈದರಾಬಾದ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

Public TV
3 Min Read
srh 1

– ಬರೋಬ್ಬರಿ 8 ಸಿಕ್ಸರ್ ಸಿಡಿಸಿ ಮಿಂಚಿದ ಕನ್ನಡಿಗ ಪಾಂಡೆ

ದುಬೈ: ಇಂದು ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ ತಂಡ ಎಂಟು ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸನ್‍ರೈಸರ್ಸ್ ಹೈದರಾಬಾದ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯ್ತು. ಈ ಮೂಲಕ ನಿಗದಿತ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು ಕೇವಲ 154 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಮೊದಲ ಎರಡು ವಿಕೆಟ್ ಬೇಗನೇ ಕಳೆದುಕೊಂಡರು ಮೂರನೇ ವಿಕೆಟ್‍ಗೆ ಭರ್ಜರಿ ಜೊತೆಯಾಟವಾಡಿದ ಪಾಂಡೆ ಮತ್ತು ಶಂಕರ್ 140 ರನ್‍ಗಳನ್ನು ಹೊಡೆದು ರೈಸರ್ಸ್ ಗೆ 8 ವಿಕೆಟ್‍ಗಳ ಜಯ ತಂದಿತ್ತರು.

WhatsApp Image 2020 10 22 at 10.56.41 PM

ಪಾಂಡೆ, ಶಂಕರ್ ದಾಖಲೆಯ ಜೊತೆಯಾಟ
ನಾಯಕ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‍ಸ್ಟೋವ್ ಅವರು ಬೇಗನೇ ಔಟ್ ಆದರು. ಆದರೆ ಮೂರನೇ ವಿಕೆಟ್‍ಗೆ ಜೊತೆಯಾದ ಮನೀಶ್ ಪಾಂಡೆ ಮತ್ತು ವಿಜಯ್ ಶಂಕರ್ ಅವರು 140 ರನ್‍ಗಳ ಜೊತೆಯಾಟವಾಡಿ ದಾಖಲೆ ಬರೆದರು. ಈ ಮೂಲಕ ಇಬ್ಬರು ಭಾರತ ಆಟಗಾರೇ ಸೇರಿ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಶತಕ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2013ರಲ್ಲಿ ಐಪಿಎಲ್‍ಗೆ ಪಾದಾರ್ಪಾಣೆ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಇದುವರೆಗೂ 24 ಬಾರಿ ಶತಕ ಜೊತೆಯಾಟವಾಡಿದ್ದಾರೆ. ಆದರೆ ಇದರಲ್ಲಿ 23 ಬಾರಿಯೂ ವಿದೇಶಿ ಆಟಗಾರರು ಪಾಲುದಾರಿಕೆ ಹೊಂದಿದ್ದಾರೆ. ಆದರೆ ಏಳು ವರ್ಷದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವಿದೇಶಿ ಆಟಗಾರನ ಪಾಲುದಾರಿಕೆ ಇಲ್ಲದೇ ಮನೀಶ್ ಪಾಂಡೆ ಮತ್ತು ರವಿ ಶಂಕರ್ ಶತಕ ಜೊತೆಯಾಟವಾಡಿ ದಾಖಲೆ ಬರೆದಿದ್ದಾರೆ.

155 ರನ್ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ ಆರಂಭಿಕ ಆಘಾತ ನೀಡಿದರು. ಈ ಮೂಲಕ ಇನ್ನಿಂಗ್ಸ್ ನ ನಾಲ್ಕನೇ ಬಾಲಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ನಂತರ ಜೋಫ್ರಾ ಆರ್ಚರ್ ಅವರೇ 2ನೇ ಓವರ್ ನಾಲ್ಕನೇ ಬಾಲಿನಲ್ಲಿ 10 ರನ್ ಗಳಿಸಿದ್ದ ಜಾನಿ ಬೈರ್‍ಸ್ಟೋವ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ನಂತರ ಅಬ್ಬರಿಸಿದ ಕನ್ನಡಿಗ ಮನೀಶ್ ಪಾಂಡೆ ಅವರು, ವಿಜಯ್ ಶಂಕರ್ ಅವರ ಜೊತೆಗೂಡಿ ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು. ಈ ಮೂಲಕ ಪವರ್ ಪ್ಲೇ ಅಂತ್ಯದ ವೇಳೆಗೆ ಹೈದರಾಬಾದ್ ತಂಡ ಎರಡು ವಿಕೆಟ್ ಕಳೆದುಕೊಂಡು ಬರೋಬ್ಬರಿ 58 ರನ್ ಪೇರಿಸಿತು. ಜೊತೆಗೆ ಪಾಂಡೆ ಮತ್ತು ವಿಜಯ್ ಶಂಕರ್ ಜೋಡಿ ಕೇವಲ 30 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿ ಆರಂಭದಲ್ಲಿ ಕುಸಿದಿದ್ದ ತಂಡಕ್ಕೆ ನೆರವಾದರು.

ಇದರ ಜೊತೆಗೆ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಮನೀಶ್ ಪಾಂಡೆ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಈ ಜೋಡಿ 71 ಬಾಲಿಗೆ ಶತಕದ ಜೊತೆಯಾಟವಾಡಿತು. ಜೊತೆಗೆ 51 ಬಾಲಿಗೆ ವಿಜಯ್ ಶಂಕರ್ ಅವರು ಅರ್ಧಶತಕ ಸಿಡಿಸಿದರು. ಕೊನೆಯವರೆಗೂ ಔಟ್ ಆಗದೇ ಉಳಿದ ಮನೀಶ್ ಪಾಂಡೆ 47 ಬಾಲಿನಲ್ಲಿ ಬರೋಬ್ಬರಿ 8 ಸಿಕ್ಸರ್ ಮತ್ತು 4 ಫೋರ್ ಸಮೇತ 83 ರನ್ ಸಿಡಿಸಿ ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕುಂಟುತ್ತಾ ಸಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಅವರು 26 ಬಾಲಿಗೆ 36 ರನ್ ಸಿಡಿಸಿ ಕೊಂಚ ವೇಗ ನೀಡಿದರು. ಕೊನೆಯಲ್ಲಿ ರಿಯಾನ್ ಪರಾಗ್ ಮತ್ತು ಜೋಫ್ರಾ ಆರ್ಚರ್ ಅವರು ಸ್ಫೋಟಕ ಬ್ಯಾಟಿಂಗ್ ಆಡಿದ ಕಾರಣ ರಾಜಸ್ಥಾನ್ ತಂಡ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು 154 ರನ್ ಸಿಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *