ದಾವಣಗೆರೆ: ಮದುವೆಗೆ ಕಡಿಮೆ ಜನ ಬನ್ನಿ ಅಂತ ನಾನು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದೆ. ಆದರೆ ಜನ ನನ್ನ ಮೇಲಿನ ಪ್ರೀತಿಯಿಂದ ಮುದುವೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮದುವೆಯಲ್ಲಿ ಕಾನೂನು ಉಲ್ಲಂಘನೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನನ್ನ ಮಗನ ಮದುವೆಗೆ ಕಡಿಮೆ ಜನ ಬನ್ನಿ ಎಂದು ಮನವಿ ಮಾಡಿದ್ದೆ. ಆದರೆ ನನ್ನ ಮೇಲಿನ ಪ್ರೀತಿಯಿಂದ ಜನರು ಜಾಸ್ತಿ ಬಂದಿದ್ದಾರೆ. ಹಾಗಂತ ಜನರು ಬರುವುದನ್ನು ತಡೆಯಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದರು.
Advertisement
Advertisement
ಎಲ್ಲರಿಗೂ ಮಾಸ್ಕ್ ಸ್ಯಾನಿಟೈಜರ್, ಥರ್ಮಲ್ ಸ್ಕಾನಿಂಗ್ ಮಾಡಲು ಹೇಳಿದ್ದೆ. ಆದರೆ ಜನ ಜಾಸ್ತಿಯಾದ ಹಿನ್ನೆಲೆ ಏನು ಮಾಡಲು ಸಾಧ್ಯವಾಗಲಿಲ್ಲ. ಕೋವಿಡ್ ಸಮಯದಲ್ಲಿ ಇಷ್ಟೊಂದು ಜನ ಸೇರಬಾರದು ಎಂದು ಮನವಿ ಮಾಡಿಕೊಂಡಿದ್ದೆ ಎಂದರು.
Advertisement
ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ನನಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ನಾನು ಯಾರ ಮೇಲೆ ಏನು ಹೇಳೋಲ್ಲ, ಯಾರ ಮೇಲೂ ಆರೋಪ ಕೂಡ ಮಾಡಲ್ಲ ಎಂದು ಅವರು ತಿಳಿಸಿದರು.
Advertisement
ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ನಡೆದ ಮಾಜಿ ಸಚಿವ, ಹಾಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ಮದುವೆಗೆ ಗಣ್ಯರ ದಂಡೇ ಆಗಮಿಸಿದ್ದು, ಅದ್ಧೂರಿಯಾಗಿ ಜಾತ್ರೆಯಂತೆ ವಿವಾಹ ಮಾಡಿದ್ದಾರೆ. ನೂನಾರು ಜನ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಸಚಿವ ಶ್ರೀರಾಮುಲು ಅವರು ಸ್ಟೇಜ್ ಮೇಲೆ ಹೋಗಿ ಕೈ ಕುಲುಕಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೆ ನೂರಾರು ಜನ ಸೇರಿದ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷವೆಂದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ವಿವಾಹದಲ್ಲಿ ಭಾಗಿಯಾಗಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೆಲಿಕಾಪ್ಟರ್‍ನಲ್ಲಿ ಮದುವೆಗೆ ಆಗಮಿಸಿದ್ದು, ಇದೇ ವೇಳೆ ಹೆಲಿಕಾಪ್ಟರ್ ನೋಡಲು ಜನ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜನ ಜಾತ್ರೆಯಂತೆ ಸೇರಿದ್ದಾರೆ. ಕಾಂಗ್ರೆಸ್ ಮುಖಂಡರು ಸಹ ಸಾಮಾಜಿಕ ಅಂತರವಿಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೊರೊನೊಗೆ ಡೋಂಟ್ ಕೇರ್ ಎಂದು ಮದುವೆ ಕಾರ್ಯಕ್ರಮದಲ್ಲಿ ಜನಸ್ತೋಮವೇ ಸೇರಿದೆ. ನೂರಾರು ಜನ ಸೇರಿದ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಚಿವ ಶ್ರೀ ರಾಮುಲು, ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.