ಬೆಂಗಳೂರು: ಪೊಗರು ವಿವಾದದ ಬಗ್ಗೆ ನಟ ಧ್ರುವ ಸರ್ಜಾ ಮೌನ ಮುರಿದಿದ್ದು, ಟ್ವೀಟ್ ಮಾಡುವ ಮೂಲಕ ಆರೋಪಗಳಿಗೆ ಉತ್ತರ ನೀಡಿದ್ದಾರೆ.
ನಮ್ಮ ಇಡೀ ಕುಟುಂಬ ಹನುಮ ಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತ, ಗೌರವಿಸುತ್ತ ಬದುಕುತ್ತಿದೆ. ತಾತನವರ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿಯೇ ಬದುಕುತ್ತಿದ್ದೇವೆ. ಕಲೆಯೇ ಧರ್ಮ, ನಾವು ಎಲ್ಲ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ ಎಂದು ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.
Jai Hanuman ???? pic.twitter.com/mqnrKkkjJH
— Dhruva Sarja (@DhruvaSarja) February 24, 2021
ನೋವಾಗಿದ್ದಕ್ಕಾಗಿಯೇ ಬೇಷರತ್ ಕ್ಷಮೆ ಕೇಳುತ್ತಿದ್ದೇನೆ. ನಿಮಗೆ ಬೇಸರವಾಗಿರುವ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್ ಆದಮೇಲೆ ನಿಮ್ಮೆದುರು ಮಾತನಾಡೋಣ ಎಂದು ನಾನೇ ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ಧವಾಗಿದೆ. ನನ್ನ ಮನವಿಯನ್ನು ಪುರಸ್ಕರಿಸಿ ಎಂದಿನಂತೆ ನಿಮ್ಮ ಆಶೀರ್ವಾದವಿರಲಿ, ಜೈ ಹನುಮಾನ್ ಎಂದು ಧ್ರುವ ಸರ್ಜಾ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಚಿತ್ರದಲ್ಲಿನ ವಿವಾದಿತ ದೃಶ್ಯಗಳನ್ನು ಖಂಡಿಸಿ ಬ್ರಾಹ್ಮಣ ಸಮುದಾಯದವರು ಹೋರಾಟ ನಡೆಸಿದ್ದರು. 12 ರಿಂದ 14 ದೃಶ್ಯಗಳನ್ನು ತೆಗೆಯಲು ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣನನ್ನು ಒದೆಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗಿತ್ತು. ಆ ದೃಶ್ಯಗಳಿಗೆ ಕತ್ತರಿ ಹಾಕಲು ಪೊಗರು ಟೀಮ್ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆಯನ್ನು ಸಹ ಯಾಚಿಸಿದ್ದಾರೆ.
ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಲಾಗಿತ್ತು.
ಪೊಗರು ಸಿನಿಮಾದ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಲಾಗಿತ್ತು. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಲಾಗಿತ್ತು.