– ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡಲ್ಲ
– ಕೇಂದ್ರದ ನಿರ್ಧಾರವನ್ನು ಖಚಿತ ಪಡಿಸಿದ 2 ಸಂಸ್ಕರಣಾ ಘಟಕಗಳು
ನವದೆಹಲಿ: ಕಚ್ಚಾ ತೈಲ ವಿಚಾರದಲ್ಲಿ ಮಧ್ಯಪ್ರಾಚ್ಯ ದೇಶಗಳ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೇರೆ ದೇಶಗಳಿಂದ ತೈಲ ಖರೀದಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ.
ಒಪೆಕ್ ರಾಷ್ಟ್ರಗಳು ಏಪ್ರಿಲ್ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಈ ರೀತಿಯ ಸೂಚನೆ ಸರ್ಕಾರದಿಂದ ಬಂದಿರುವುದು ಹೌದು ಎಂದು ಎರಡು ತೈಲ ಸಂಸ್ಕರಣಾ ಘಟಕಗಳು ಖಚಿತಪಡಿಸಿವೆ.
Advertisement
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ಶೇ.84ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.60ರಷ್ಟು ಮಧ್ಯಪ್ರಾಚ್ಯದಿಂದಲೇ ಆಮದಾಗುತ್ತದೆ. ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಮಧ್ಯಪ್ರಾಚ್ಯದ ದೇಶಗಳಿಂದ ಬರುವ ತೈಲ ಬಹಳ ಅಗ್ಗ.
Advertisement
ಭಾರತದ ಮನವಿಯ ಹೊರತಾಗಿಯೂ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಸೌದಿ ಇಂಧನ ಸಚಿವರು ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಬಹಳ ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಬಳಸಿ ಎಂದು ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಗೆ ಮುಂದಾಗಿದೆ. ಇದನ್ನೂ ಓದಿ: ಸೌದಿ ತೈಲ ಘಟಕದ ಮೇಲೆ ಡ್ರೋನ್ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ
ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2020ರಲ್ಲಿ ತೈಲ ಬೇಡಿಕೆ ಕುಸಿತಗೊಂಡರೂ ನಾವು ಅವರ ಜೊತೆ ಮಾಡಿಕೊಂಡಿದ್ದ ತೈಲ ಆಮದನ್ನು ರದ್ದು ಮಾಡಿರಲಿಲ್ಲ. ಹೀಗಾಗಿ ತೈಲ ಆಮದು ವಿಚಾರದಲ್ಲಿ ಕೆಲವೇ ದೇಶಗಳನ್ನು ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ.
ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.
ಇರಾಕ್ ಹಾಗೂ ಸೌದಿ ಅರೇಬಿಯಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿದೆ. ಇರಾಕ್ ಈಗಾಗಲೇ ವಾರ್ಷಿಕ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ಕೇಳಿದ್ದ ಪ್ರಶ್ನೆಗೆ ಪೆಟ್ರೋಲಿಯಂ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಒಟ್ಟಿಗೆ ಇತ್ತು. ಆದರೆ ಈಗ ಕೆಲ ದೇಶಗಳು ಅವರ ಆರ್ಥಿಕತೆಗಾಗಿ ಕೆಲಸ ಮಾಡುತ್ತಿವೆ ಎಂದು ಅಧಿಕಾರಿ ದೂರಿದ್ದಾರೆ.