ಪಣಜಿ: ಕ್ರಿಕೆಟ್ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮದುವೆಯ ಬಂಧನದಲ್ಲಿ ಬಂಧಿಯಾಗಿದ್ದಾರೆ. ಕ್ರಿಕೆಟ್ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಮದುವೆ ನಡೆದಿದ್ದು, ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು. ಮದುವೆಗೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ಬಳಸದಂತೆ ನಿಷೇಧಿಸಲಾಗಿತ್ತು.
ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡಿರುವ ಬುಮ್ರಾ, ಇಂದಿನಿಂದ ಹೊಸ ಜೀವನ ಆರಂಭವಾಗಿದೆ. ಇವತ್ತು ಅತ್ಯಂತ ಸಂಭ್ರಮದ ದಿನವಾಗಿದೆ ಎಂದು ಬರೆದುಕೊಂಡಿದ್ದಾರೆ. ಮದುವೆ ಫೋಟೋಗಳು ರಿವೀಲ್ ಆಗುತ್ತಿದ್ದಂತೆ ಸೆಲೆಬ್ರಿಟಿಗಳು ಸೇರಿದಂತೆ ಫ್ಯಾನ್ಸ್ ಬುಮ್ರಾ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆ ಮದುವೆಯಲ್ಲಿ ಕೇವಲ 20 ಜನರು ಭಾಗಿಯಾಗಿದ್ದರು ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಪಂದ್ಯದಿಂದ ರಜೆ ಪಡೆದು ಹೊರ ಬಂದಿದ್ದರು. ಬುಮ್ರಾ ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯದಿಂದ ಹೊರ ಬಂದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ವಿಷಯ ಚರ್ಚೆ ಆಗುತ್ತಿದ್ದರೂ, ಬುಮ್ರಾ ಮಾತ್ರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.
ಯಾರು ಸಂಜನಾ ಗಣೇಶನ್?:
ಸಂಜನಾ ಗಣೇಶನ್ 2019ರ ಐಸಿಸಿ ವರ್ಲ್ಡ್ ಕಪ್ ನಿಂದ ಐಪಿಎಲ್ ಪಂದ್ಯಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕಿ ಸಹ ಆಗಿದ್ದರು. 2013ರ ಫೆಮಿನಾ ಗಾರ್ಜಿಯಸ್ ನ ವಿಜೇತೆಯಾಗಿರುವ ಸಂಜನಾ, ಖಾಸಗಿ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಜನಪ್ರಿಯ ಪಡೆದುಕೊಂಡಿದ್ದಾರೆ. ಪುಣೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಸಂಜನಾ, ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಚಿರಪರಿಚಿತರು. 2014ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ವರೆಗೂ ಸಂಜನಾ ತಲುಪಿದ್ದರು.
View this post on Instagram