– ಉಸಿರುಗಟ್ಟಿ ಕೊಲೆಗೈದು ಹೊಲದಲ್ಲಿ ಹೂತಿಟ್ರು
– ಮದುವೆಯಾಗಲು ಹೊರಟವ ಮಸಣ ಸೇರಿದ
ರಾಯಚೂರು: ಜಿಲ್ಲೆಯಲ್ಲೊಂದು ಭಯಾನಕ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆ ನಿಶ್ಚಯ ಆಗಿದ್ದ ಯುವತಿಯಿಂದಲೇ ಯುವಕ ಹತ್ಯೆಯಾಗಿದ್ದಾನೆ.
ಸಿರವಾರ ಪಟ್ಟಣದ ಮೆಹಬೂಬ್ (30) ಕೊಲೆಯಾಗಿರೋ ಯುವಕ. ಈತನನ್ನು 15 ದಿನಗಳ ಹಿಂದೆ ಕೊಲೆ ಮಾಡಿ, ಆರೋಪಿಗಳು ಶವವನ್ನು ಜಮೀನಿನಲ್ಲಿ ಹೂತಿದ್ದರು. ಈ ಘಟನೆ ನಡೆದು ಸುಮಾರು 15 ದಿನಗಳ ಬಳಿಕ ಪ್ರಕರಣ ಬಯಲಾಗಿದೆ.
ಸಿರವಾರ ಪಟ್ಟಣದ ಮೆಹಬೂಬ್‍ಗೆ ರೋಡಲಬಂಡಾ ಗ್ರಾಮದ ಖಾಜಾಬಿ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಶಬ್ಬೀರ್ ಎಂಬಾತ ಖಾಜಾಬಿಯನ್ನ ಪ್ರೀತಿಸುತ್ತಿದ್ದ. ಖಾಜಾಬಿ ಮದುವೆ ನಿಶ್ಚಯ ಆಗಿದ್ದರಿಂದ ಆತಂಕಗೊಂಡ ಶಬ್ಬೀರ್, ಒಂದು ದಿನ ತನ್ನ ಸ್ನೇಹಿತರ ಜೊತೆ ಸೇರಿ ಮೆಹಬೂಬ್‍ನನ್ನೇ ಕೊಲೆ ಮಾಡಿದ್ದಾನೆ. ಈ ಕೊಲೆಗೆ ಯುವತಿ ಖಾಜಾಬಿ ಕೂಡ ಸಾಥ್ ನೀಡಿದ್ದಾಳೆ.
ನ.16ರಂದು ಸಿರವಾರ ಪಟ್ಟಣಕ್ಕೆ ಬಂದಿದ್ದ ಆರೋಪಿ ಶಬ್ಬೀರ್, ಪಟ್ಟಣದ ರೆಡಿಯೋ ಅಂಗಡಿಯ ಬಳಿ ಕುಳಿತಿದ್ದ ಮೆಹಬೂಬ್ ನನ್ನು ಒತ್ತಾಯ ಪೂರ್ವಕವಾಗಿ ಕವಿತಾಳ ಪಟ್ಟಣಕ್ಕೆ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಶಬ್ಬೀರ್ ಸ್ನೇಹಿತರಾದ ಚಂದ್ರು, ಫಯಾಜ್ ನನ್ನು ಕರೆಸಿಕೊಂಡು ಮದ್ಯಪಾನದ ಪಾರ್ಟಿ ಮಾಡಿದ್ದಾರೆ. ಇದಾದ ಬಳಿಕ ಶಬ್ಬೀರ್, ಚಂದ್ರು, ಫಯಾಜ್ ಕೊಲೆ ಮಾಡುವ ಸ್ಕೆಚ್ ಹಾಕಿದ್ರು. ಅಲ್ಲದೆ ಕವಿತಾಳ ಪಟ್ಟಣದಿಂದ ರೋಡಲಬಂಡಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅನ್ವರಿ ಸೀಮಾಂತರದಲ್ಲಿ ಬರುವ ಹೊಲದಲ್ಲಿ ಟವಲ್ ನಿಂದ ಉಸಿರುಗಟ್ಟಿ ಕೊಲೆ ಮಾಡಿ ಆರೋಪಿಗಳು ಹೂತು ಹಾಕಿದ್ದಾರೆ.
ಇತ್ತ ಮದುವೆ ನಿಶ್ಚಯವಾಗಿದ್ದ ಮಗ ಏಕಾಏಕಿ ಕಾಣೆಯಾಗಿದ್ದರಿಂದ ಗಾಬರಿಗೊಂಡ ಮೆಹಬೂಬ್ ಪೋಷಕರು, ನವೆಂಬರ್ 18ರಂದು ಸಿರವಾರ ಠಾಣೆಯಲ್ಲಿ ದೂರು ನೀಡಿದ್ರು. ದೂರು ಸ್ವೀಕರಿಸಿ ತನಿಖೆ ಆತನ ಪತ್ತೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಈ ಹಿನ್ನೆಲೆಯಲ್ಲಿ ಒಟ್ಟಾರೆ ಘಟನೆ ನವೆಂಬರ್ 28ರಂದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಸಿರವಾರ ಪೊಲೀಸರು ಖಾಜಾಬಿ ಹಾಗೂ ಶಬ್ಬೀರ್ ಇಬ್ಬರನ್ನೂ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಚಂದ್ರು ಹಾಗೂ ಫಯಾಜ್ ನಾಪತ್ತೆಯಾಗಿದ್ದು, ಅವರಿಗಾಗಿ ಪೋಲೀಸರು ಹುಡುಕುತ್ತಿದ್ದಾರೆ.