– ನನಗೆ ಈ ಮದುವೆ ಇಷ್ಟವಿಲ್ಲ ಎಂದ ಯುವತಿ
ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿ ಕರೆದೊಯ್ದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದು, ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ಜನವರಿ 21 ರಂದು ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿದ್ದ ಯುವತಿ ಮನೆಗೆ ಸ್ನೇಹಿತರೊಂದಿಗೆ ಯುವಕ ಸತೀಶ್ ನುಗ್ಗಿದ್ದನು. ಬಳಿಕ ತಾನು ಯುವತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಬಲವಂತವಾಗಿ ತಾಳಿ ಕಟ್ಟಿ ಕರೆದೊಯ್ದಿದ್ದ.
ಯುವತಿಯ ಮದುವೆ ಜ.25 ರಂದು ನಿಶ್ವಯವಾಗಿತ್ತು. ಎರಡು ಕುಟುಂಬಗಳು ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರಲ್ಲದೆ ಲಗ್ನಪತ್ರಿಕೆಯನ್ನು ಹಂಚಿದ್ದರು. ಈ ನಡುವೆ ಸತೀಶ್‍ನ ಕೃತ್ಯದಿಂದ ಯುವತಿಯ ಮದುವೆ ನಿಂತು ಹೋಗಿತ್ತು. ಇದೀಗ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ತನಗೆ ಬಲವಂತವಾಗಿ ತಾಳಿಕಟ್ಟಿ ಎಳೆದೊಯ್ದಿರುವುದಾಗಿ ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿಯ ಸಹೋದರ, ಕೇವಲ ಸತೀಶ್‍ನಷ್ಟೆ ಬಂಧಿಸಿದರೆ ಸಾಲದು. ಈ ಕೃತ್ಯಕ್ಕೆ ಸಾಥ್ ನೀಡಿದ್ದ ಎಲ್ಲರನ್ನೂ ಬಂಧಿಸುವಂತೆ ಮನವಿ ಮಾಡಿದ್ದಾರೆ. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸುವುದಾಗಿ ಎಸ್‍ಪಿ ಶ್ರೀನಿವಾಸ್‍ಗೌಡ ಹೇಳಿದ್ದಾರೆ.