-ಪುಟ್ಟ ಹಳ್ಳಿಯಲ್ಲಿ 70ಕ್ಕೂ ಹೆಚ್ಚು ಜನರಿಗೆ ಸೋಂಕು
ರಾಯಚೂರು: ತಾಲೂಕಿನ ತಲೆಮಾರಿ ಗ್ರಾಮ ಈಗ ಜಿಲ್ಲೆಯಲ್ಲಿ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಒಂದೇ ದಿನ 38 ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಗ್ರಾಮದ ಒಟ್ಟು ಸೋಂಕಿತರ ಸಂಖ್ಯೆ 70 ಕ್ಕೇರಿದೆ.
1,080 ಮನೆಗಳಿರುವ ಗ್ರಾಮದಲ್ಲಿ 5000 ಜನಸಂಖ್ಯೆ ಇದೆ. ಇದರಲ್ಲಿ 70 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಉಳಿದವರು ಮನೆಯಿಂದ ಹೊರಗಡೆ ಬರುತ್ತಿಲ್ಲ. ಹಬ್ಬಗಳನ್ನು ಆಚರಿಸುತ್ತಿಲ್ಲ. ನಾಗರಪಂಚಮಿಯನ್ನ ಮನೆಯಲ್ಲೇ ಆಚರಿಸಿಕೊಂಡಿರುವ ಜನ ವರಮಹಾಲಕ್ಷ್ಮಿ ಪೂಜೆಯನ್ನೂ ಮನೆಯಲ್ಲೇ ಮುಗಿಸಿಕೊಳ್ಳುತ್ತಿದ್ದಾರೆ. ಬಕ್ರಿದ್ ಹಬ್ಬದ ಸಂಭ್ರಮಕ್ಕೂ ಗ್ರಾಮದಲ್ಲಿ ಬ್ರೇಕ್ ಬಿದ್ದಿದೆ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಮದುವೆಗಳಲ್ಲಿ ಹೆಚ್ಚು ಜನ ಸೇರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.
Advertisement
Advertisement
ಮದುವೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣದ ಜನ ಎಗ್ಗಿಲ್ಲದೇ ಸೇರಿದ್ದರಿಂದ ಇಡೀ ಊರಿನ ತುಂಬಾ ಕೊರೊನಾ ಹಬ್ಬಿದೆ. ಗ್ರಾಮದಲ್ಲಿ ನಡೆದ ಐದು ಮದುವೆಗಳಲ್ಲಿ ಕೆಲ ಮದುವೆಗಳಿಗೆ ಅನುಮತಿಯನ್ನೇ ಪಡೆದಿಲ್ಲ. ಅಲ್ಲದೇ ನೂರಾರು ಜನರನ್ನ ಮದುವೆಗಳಿಗೆ ಸೇರಿಸಲಾಗಿದೆ. ಸದ್ಯ ಗ್ರಾಮದಲ್ಲಿ ಆರು ಕಡೆ ಕಂಟೈನ್‍ಮೆಂಟ್ ಝೋನ್ ಮಾಡಲಾಗಿದ್ದು, ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಯೋಚನೆಯಲ್ಲಿ ಜಿಲ್ಲಾಡಳಿತ ಇದೆ.
Advertisement
Advertisement
ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸೋಂಕಿತರನ್ನ ಕೋವಿಡ್ ಕೇರ್ ಸೆಂಟರ್‍ಗಳಿಗೆ ರವಾನಿಸಲಾಗಿದೆ. ಗ್ರಾಮದಲ್ಲಿ ಉಳಿದ ಕೊರೋನಾ ಭೀತಿಯಲ್ಲಿ ಬದುಕುತ್ತಿದ್ದಾರೆ.